ಆ ಇಬ್ಬರು ಪ್ರೇಮಿಗಳ ನಡುವೆ ಮೊದಲಿದ್ದ ಮಾತುಕತೆ ಈಗ ಇಲ್ಲವಾಗಿದೆ. ದೂರವಿರುವ ಕಾರಣ ಇಬ್ಬರ ಭೇಟಿಯೂ ಅಷ್ಟಕ್ಕಷ್ಟೆ. ಸಂಪರ್ಕ ಕೊಂಡಿ ಅಂತ ಇದ್ದದ್ದು ಮೊಬೈಲು. ಮೊದಲಾದರೆ ಹಗಲು ರಾತ್ರಿ ಎನ್ನದೆ ಬರೀ ಮಾತಿನಲ್ಲೇ ಮುಳುಗಿದ್ದ ಜೋಡಿಯದು. ಈಗ ಇಬ್ಬರ ನಡುವೆ ಬರೀ ನೀರವ ಮೌನ.
ಸ್ನೇಹಿತನ ಈ ಬದಲಾದ ವರ್ತನೆಯನ್ನು ನೋಡಿ ಹಾಸ್ಟೆಲಿನಲ್ಲಿದ್ದ ಹತ್ತಿರದ ಗೆಳೆಯನಿಗೂ ದಿಗಿಲು. ಯಾವಾಗಲೂ ಅವನ ಕೋಣೆಯ ಮುಚ್ಚಿದ ಕೋಣೆಯ ಸಂದಿಯಿಂದ ಕೇಳಿ ಬರುತ್ತಿದ್ದ ಕುಟು ಕುಟು ಶಬ್ದ ಬೇರೆ. ಮೊದಲೇ ಅವನ ಪ್ರಿಯತಮೆಯ ಜೊತೆ ಮಾತುಕತೆ ಬೇರೆ ಮೊದಲಿದ್ದ ಹಾಗೆ ಇಲ್ಲ. ಪ್ರಾಣ ಸ್ನೇಹಿತನ ರೂಮಿನಿಂದ ಕೇಳಿ ಬರುತ್ತಿದ್ದ ಆ ಕುಟು ಕುಟು ಶಬ್ಧಕ್ಕೆ ಕಾರಣ ಕಂಡು ಹಿಡಿಯಲೇಬೇಕೆಂದು ಇವನು ಪಣ ತೊಟ್ಟ. ಎಷ್ಟೇ ಪ್ರಯತ್ನಪಟ್ಟರೂ ಅ ಶಬ್ಧದ ರಹಸ್ಯ ಮಾತ್ರ ಪತ್ತೆ ಹಚ್ಚಲು ಅವನಿಗೆ ಸಾಧ್ಯವಾಗಲೇ ಇಲ್ಲ. ಕೊನೆಗೆ ತಲೆಕೆಡಿಸಿಕೊಂಡು ಸಾಕಾಗಿ ಅವನನ್ನೇ ಕೇಳಬೇಕೆಂದು ನಿರ್ಧಾರ ಮಾಡಿದ. ಅವರಿಬ್ಬರ ಸಂಭಾಷಣೆ ಈ ಕೆಳಕಂಡಂತಿದೆ.
ಗೆಳೆಯಾ ನಿನ್ನ ಒಂದು ಮಾತು ಕೇಳಬಹುದಾ?.
ಅದೇನು ಕೇಳು ಪರ್ವಾಗಿಲ್ಲ.
ನೀನು ನಿನ್ನ ಹುಡುಗಿ ನಡುವೆ ಏನಾದ್ರು ಮನಸ್ತಾಪ ಆಯ್ತಾ? ನಾನು ಹೀಗೆ ಕೇಳಿದೆ ಅಂತ ಬೇಜಾರು ಮಾಡ್ಕೋಬೇಡ.
ಮನಸ್ತಾಪನಾ? ಅಂತದ್ದೇನು ಇಲ್ಲ ಮಾರಾಯ.
ಮತ್ತೆ ಯಾಕೆ ಇತ್ತೀಚೆಗೆ ಇಬ್ಬರ ನಡುವೆ ಮಾತುಕತೆ ಒಂದೂ ಇಲ್ಲ. ಯಾವಾಗ್ಲು ಒಬ್ಬನೇ ರೂಮಲ್ಲೇ ಕೂತಿರ್ತೀಯ. ಅದೂ ಬೇರೆ ಏನೋ ಕುಟ್ಟುತ್ತಾ ಇರೋ ಶಬ್ಧ ಬೇರೆ ಬರ್ತಾ ಇರುತ್ತೆ ನಿನ್ನ ರುಮಿನಿಂದ ಯಾಕೊ ನಿನ್ನ ನಡವಳಿಕೇನೆ ವಿಚಿತ್ರ ಆಗಿದೆ ಮಗಾ ಇತ್ತೀಚೆಗೆ ಅಂದ.
ಇದನ್ನು ಕೇಳಿದ ಕೂಡಲೇ ಸ್ನೇಹಿತನ ದುಃಖದ ಕಟ್ಟೆ ಒಡೆದು ಅಳುವುದಕ್ಕೆ ಶುರು ಮಾಡಿದ. ಎಷ್ಟು ಸಮಾಧಾನ ಮಾಡಿದರೂ ಗಂಟೆಯವರೆಗೆ ಅವನ ಅಳು ನಿಲ್ಲಲೇ ಇಲ್ಲ. ಕೊನೆಗೆ ಹಾಗೆ ಹೀಗೆ ಅವನನ್ನು ಸಮಾಧಾನ ಮಾಡಿ ಯಾಕೆ ಅತ್ತಿದ್ದು ನಾನೇನಾದ್ರು ತಪ್ಪು ಕೇಳಿದ್ನಾ ಗೆಳೆಯ ಅಂತ ಕೇಳಿದ.
ಅದಕ್ಕೆ ಇವನು ಇಲ್ಲ ಕಣೋ ನೀನು ಕೇಳಿದ್ರಲ್ಲಿ ಯಾವ ತಪ್ಪೂ ಇಲ್ಲ. ನನ್ನ ಮತ್ತು ನನ್ನ ಹುಡುಗಿ ನಡುವೆ ಯಾವ ಮನಸ್ತಾಪನೂ ಇಲ್ಲ ಆದರೆ ನನ್ನ ಮತ್ತು ಅವಳ ನಡುವಿನ ಪ್ರೀತಿ ಸಹಿಸದವರಿಂದ ಕಣೋ ಪ್ರಾಬ್ಲೆಮ್ಮು ಆಗಿರೋದು, ಅಂದ.
ಅದಕ್ಕೆ ಇವನು ಯಾಕೆ ಮಗಾ ಹುಡುಗಿ ಮನೆಯವರಿಗೆ ಏನಾದ್ರೂ ಈ ವಿಷಯ ಗೊತ್ತಾಯ್ತ ಹೇಗೆ ಅಂತ ಕೇಳಲಾಗಿ.
ಇಲ್ಲ ಅವಳ ಮತ್ತು ನನ್ನ ಮನೆಯವರಿಂದ ಯಾವುದೇ ಪ್ರಾಬ್ಲಮ್ಮು ಇಲ್ಲ ಮಗಾ. ಇದಕ್ಕೆಲ್ಲಾ ಕಾರಣ ಅಂದ್ರೆ ನೆಟ್‌ವರ್ಕ್‌ನೋರು ಅಂದ. ಇನ್ನೊಬ್ಬನಿಗೆ ಆಶ್ಚರ್ಯ "ಏನು ನೆಟ್‌ವರ್ಕ್‌ನೋರಿಂದ ಪ್ರಾಬ್ಲೆಮ್ಮ, ಏನಾಯ್ತು" ಅಂತ ಆಶ್ಚರ್ಯದಿಂದ ಕೇಳಿದ.
ಹೌದು ಕಣೋ ಇತ್ತೀಚೆಗೆ ಕಾಲ್‌ರೇಟ್ ಬೇರೆ ಜಾಸ್ತಿ ಮಾಡಿಬಿಟ್ಟಿದಾರೆ ಮೊದಲು ಇದ್ದ ಹತ್ತು ಪೈಸೆಯ ಟಾರಿಫ್ ಈಗ ಇಲ್ಲ, ಅದಕ್ಕೇ ಮೊದಲಿನ ಹಾಗೆ ಈಗ ಕಾಲ್ ಮಾಡಿ ಮಾತಾಡೋಕೆ ಆಗ್ತಾ ಇಲ್ಲ" ಅಂದಿಂದು ಕೇಳಿ ಕುತೂಹಲದಿಂದ ಕುದಿಯುತ್ತಿದ್ದವನಿಗೆ ತಲೆ ತಿರುಗೋದೊಂದೆ ಬಾಕಿ, ಆದರು ಸಾವರಿಸಿಕೊಂಡು "ಮತ್ತೆ ಯಾಕೆ ನಿನ್ನ ರೂಮಿನಿಂದ ಕುಟು ಕುಟು ಅಂತಾ ಯಾವಾಗ್ಲು ಶಬ್ಧ ಕೇಳುತ್ತಾ ಇರುತ್ತೆ" ಅಂತ ಕೇಳಲಾಗಿ.
ಅದಾ ಮಗಾ ಕಾಲ್‌ರೇಟ್ ಜಾಸ್ತಿ ಆದಮೇಲೆ ಇಬ್ಬರೂ ಮಾತಾಡಿಕೊಂಡು ಮೆಸೇಜ್ ಆಫರ್ ಹಾಕಿಸಿಕೊಂಡಿದೀವಿ ಅದೂ ಬೇರೆ ನಂದು ನೋಕಿಯ ಡಬ್ಬಲ್ ಒನ್ ಡಬ್ಬಲ್ ಝೀರೋ ಸೆಟ್ ಅಲ್ವ ಮೆಸೇಜ್ ಟೈಪ್ ಮಾಡಬೇಕಾದ್ರೆ ಆ ಶಬ್ಧ ಬರೋದು ಅಂತ ಅವನು ಹೇಳಿದ್ದು ಕೇಳಿ, ಏನೋ ಸೀಕ್ರೆಟ್ ಇರಬಹುದು ಅಂತ ಕಾಯುತ್ತಿದ್ದ ಇನ್ನೊಬ್ಬನಿಗೆ ನಿಮ್ಮ ರೀತಿಯೇ ಭ್ರಮ ನಿರಸನ ಆಗಿದ್ದಂತೂ ಸುಳ್ಳಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ