ಅವಳೊಮ್ಮೆ ತನಗೆ ಬಂಗಾರದ್ದೇನಾದರು ಕೊಡಿಸಿ ಅಂತ ಕೇಳಿದಳು ಅದಕ್ಕಿವನು ತನ್ನ ಬಂಗಾರದಂತ ಹೃದಯವನ್ನೇ ನಿನಗೆ ಕೊಟ್ಟಾಗಿದೆಯಲ್ಲೇ ಅಂದ.
ಮತ್ತೊಂದು ದಿನ ಮುತ್ತಿನ ಓಲೆ ನೋಡಿ ಅಂತಹದ್ದೇ ನನಗೆ ಬೇಕು ಕೊಡಿಸಿ ಅಂದಳು, ಒಂದು ಸಿಹಿ ಮುತ್ತು ಕೊಟ್ಟು ಇವನು ಮುಗುಳ್ನಗೆ ಸೂಸಿದ್ದ.
ವಿಮಾನದಲ್ಲಿ ಕರ್ಕೊಂಡು ಹೋಗಿ ಒಮ್ಮೆ ಅಂತ ಕೇಳಿದ್ದ ಅವಳನ್ನು ವಿಮಾನಗಳು ತಲೆ ಮೇಲೆಯೇ ಇಳಿದಂತೆ, ಹಾರುವಂತೆ ಭಾಸವಾಗುವ ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪದ ಜಾಗದ ಹೈವೇಯಲ್ಲಿ ಗಾಡಿ ನಿಲ್ಲಿಸಿ ಹತ್ತಿರದಲ್ಲೇ ಹಾರಾಡುವ ವಿಮಾನಗಳನ್ನು ತೋರಿಸಿದ್ದ.
ಸ್ವರ್ಗವನ್ನು ನೋಡಬೇಕೆಂದವಳಿಗೆ ನಾಲ್ಕು ಗೋಡೆಯ ಮಧ್ಯೆ ಶಯನ ಗೃಹದಲ್ಲೇ ಸ್ವರ್ಗವನ್ನು ಧರೆಗಿಳಿಸಿದ್ದ.
ಲೇಟೆಸ್ಟ್ ಡಿಸೈನರ್ ವೇರ್ ಕೊಡಿಸಿ ಅಂದವಳಿಗೆ ಹುಟ್ಟುಡುಗೆಯನ್ನೇ ಮೈ ತುಂಬಾ ಉಡಿಸಿ, ಅವಳ ಪ್ರತಿಬಿಂಬವನ್ನು ಕನ್ನಡಿಯಲ್ಲಿ ತೋರಿಸಿ ಚಂದ ಕಾಣ್ತಿದಿಯ ಕಣೇ ಅಂತ ಅವಳನ್ನು ಹೊಗಳಿ ಸಂತೋಷಪಟ್ಟಿದ್ದ.
ಮಳೆಯಲ್ಲಿ ನೆನೆಯೋ ಆಸೆಯಾಗ್ತಿದೆ ಅಂತ ಅವಳು ಹೊರಗೆ ಬರುತ್ತಿದ್ದ ಮಳೆ ತೋರಿಸಿ ಹೇಳಿದಾಗ ಮಳೆಯಲ್ಲಿ ನೆನೆದರೆ ಆರೋಗ್ಯ ಕೆಡುತ್ತೆ ಬಂಗಾರಿ ಅಂತ ತನ್ನ ಪ್ರೀತಿಯ ಮಳೆಯಲ್ಲೇ ತೋಯಿಸಿ ತೊಪ್ಪೆಯಾಗಿರಿಸಿದ್ದ.
ಒಂದು ದಿನ ಅವಳು ಅವನಿಗೆ ನಿನ್ನ ಪ್ರೀತಿ ಬರೀ ಬೂಟಾಟಿಕೆ, ನಾನು ಕೇಳಿದ ಒಂದನ್ನೂ ಇದುವರೆಗೆ ನೀನು ಕೊಡಿಸಲೇ ಇಲ್ಲ. ನಾನು ಕೇಳಿದ್ದೊಂದಾದರೆ ನೀನು ಮಾಡೋದೇ ಒಂದು ಅಂತ ಚುಚ್ಚಿದಳು.
ಅವಳು ಕೇಳಿದ್ದಕ್ಕಿಂತ ಹೆಚ್ಚಿನದನ್ನೇ ಕೊಟ್ಟಿದ್ದೇನೆ, ತಾನು ತಪ್ಪಿದ್ದಾದ್ರು ಎಲ್ಲಿ ಅಂತ ಯೋಚಿಸಿ ಯೋಚಿಸಿ ಖಿನ್ನನಾದ.
ಅಂದಿನಿಂದ ಅವನು ತನ್ನಾಕೆಯ ಆಸೆಗಳನ್ನು ಪೂರೈಸಲು ಶಕ್ತಿ ಮೀರಿ ಪ್ರಯತ್ನಿಸತೊಡಗಿದ. ತನ್ನ ಆಸೆಗಳನ್ನು ಸಂಪೂರ್ಣವಾಗಿ ಅವಳಿಗಾಗಿ ಕೊಂದುಕೊಂಡ.
ಅವಳಿಗೆ ತನ್ನ ಗಂಡ ತುಂಬಾ ಯಾಂತ್ರಿಕನಾಗಿದ್ದಾನೆ ಅನ್ನಿಸತೊಡಗಿದೆ. ಕೇಳಿದ್ದೆಲ್ಲ ಕೊಡಿಸುತ್ತಿದ್ದರೂ ಕೂಡ ಅದರಲ್ಲಿ ಮುಖ್ಯವಾಗಿ ಇರಬೇಕಿದ್ದ ಪ್ರೀತಿಯ ಮಿಶ್ರಣವೇ ಮಾಯವಾಗಿದೆ.
ನೀನೇಕೆ ನನ್ನೊಂದಿಗೆ ಮಾತಾಡೋದೆ ಕಡಿಮೆ ಆಗಿದೆ ಅಂತ ಒತ್ತಾಯಪೂರ್ವಕವಾಗಿ ಅವನನ್ನು ಕೇಳಿದವಳಿಗೆ ತನ್ನ ಹೃದಯ ಬಡಿತ ಕೇಳಿಸಿ ಹೆದರಬೇಡ ಬದುಕಿದ್ದೇನೆ ಅಂದಿದ್ದ.
ಅವನ ಬದಲಾದ ವರ್ತನೆಗಳು ಅವಳಿಗೆ ಯಕ್ಷಪ್ರಶ್ನೆಯಾಗಿ ಉಳಿದಿದೆ. ಅವನನ್ನು ಮೊದಲಿನ ಸ್ಥಿತಿಗೆ ತರುವುದು ಹೇಗೆ ಎಂದು ಯೋಚಿಸಿ ಕೃಶಳಾಗುತ್ತಾ ಸಾಗಿದ್ದಾಳೆ.
ಅವನೂ ಕೂಡ ಅವಳು ಕೇಳಿದ್ದೆಲ್ಲಾ ಕೊಡಿಸಿದರೂ ಹೀಗೇಕೆ ಆಗುತ್ತಿದ್ದಾಳೆ ಎನ್ನುವ ಉತ್ತರ ಗೊತ್ತಾಗದೆ ಇಂಚಿಂಚಾಗಿ ತನ್ನನ್ನು ತಾನು ಕೊಲೆ ಮಾಡುತ್ತಾ ಸಾಗಿದ್ದಾನೆ.
ಇಬ್ಬರ ಮಧ್ಯೆ ಗೋಡೆಯಂತು ದಟ್ಟವಾಗಿ ಬೆಳೆದಾಗಿದೆ. ತಮ್ಮ ನಡುವೆ ಆದ ತಪ್ಪಾದರೂ ಏನು ಎನ್ನುವುದು ಇಬ್ಬರಿಗೂ ಇದುವರೆಗು ತಿಳಿದಿಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ