ಶುಕ್ರವಾರ, ಮಾರ್ಚ್ 29, 2013

ಮೌನ ರಹಸ್ಯ


ಆ ಇಬ್ಬರು ಪ್ರೇಮಿಗಳ ನಡುವೆ ಮೊದಲಿದ್ದ ಮಾತುಕತೆ ಈಗ ಇಲ್ಲವಾಗಿದೆ. ದೂರವಿರುವ ಕಾರಣ ಇಬ್ಬರ ಭೇಟಿಯೂ ಅಷ್ಟಕ್ಕಷ್ಟೆ. ಸಂಪರ್ಕ ಕೊಂಡಿ ಅಂತ ಇದ್ದದ್ದು ಮೊಬೈಲು. ಮೊದಲಾದರೆ ಹಗಲು ರಾತ್ರಿ ಎನ್ನದೆ ಬರೀ ಮಾತಿನಲ್ಲೇ ಮುಳುಗಿದ್ದ ಜೋಡಿಯದು. ಈಗ ಇಬ್ಬರ ನಡುವೆ ಬರೀ ನೀರವ ಮೌನ.

ಸ್ನೇಹಿತನ ಈ ಬದಲಾದ ವರ್ತನೆಯನ್ನು ನೋಡಿ ಹಾಸ್ಟೆಲಿನಲ್ಲಿದ್ದ ಹತ್ತಿರದ ಗೆಳೆಯನಿಗೂ ದಿಗಿಲು. ಯಾವಾಗಲೂ ಅವನ ಕೋಣೆಯ ಮುಚ್ಚಿದ ಕೋಣೆಯ ಸಂದಿಯಿಂದ ಕೇಳಿ ಬರುತ್ತಿದ್ದ ಕುಟು ಕುಟು ಶಬ್ದ ಬೇರೆ. ಮೊದಲೇ ಅವನ ಪ್ರಿಯತಮೆಯ ಜೊತೆ ಮಾತುಕತೆ ಬೇರೆ ಮೊದಲಿದ್ದ ಹಾಗೆ ಇಲ್ಲ. ಪ್ರಾಣ ಸ್ನೇಹಿತನ ರೂಮಿನಿಂದ ಕೇಳಿ ಬರುತ್ತಿದ್ದ ಆ ಕುಟು ಕುಟು ಶಬ್ಧಕ್ಕೆ ಕಾರಣ ಕಂಡು ಹಿಡಿಯಲೇಬೇಕೆಂದು ಇವನು ಪಣ ತೊಟ್ಟ. ಎಷ್ಟೇ ಪ್ರಯತ್ನಪಟ್ಟರೂ ಅ ಶಬ್ಧದ ರಹಸ್ಯ ಮಾತ್ರ ಪತ್ತೆ ಹಚ್ಚಲು ಅವನಿಗೆ ಸಾಧ್ಯವಾಗಲೇ ಇಲ್ಲ. ಕೊನೆಗೆ ತಲೆಕೆಡಿಸಿಕೊಂಡು ಸಾಕಾಗಿ ಅವನನ್ನೇ ಕೇಳಬೇಕೆಂದು ನಿರ್ಧಾರ ಮಾಡಿದ. ಅವರಿಬ್ಬರ ಸಂಭಾಷಣೆ ಈ ಕೆಳಕಂಡಂತಿದೆ.

ಗೆಳೆಯಾ ನಿನ್ನ ಒಂದು ಮಾತು ಕೇಳಬಹುದಾ?.

ಅದೇನು ಕೇಳು ಪರ್ವಾಗಿಲ್ಲ.

ನೀನು ನಿನ್ನ ಹುಡುಗಿ ನಡುವೆ ಏನಾದ್ರು ಮನಸ್ತಾಪ ಆಯ್ತಾ? ನಾನು ಹೀಗೆ ಕೇಳಿದೆ ಅಂತ ಬೇಜಾರು ಮಾಡ್ಕೋಬೇಡ.

ಮನಸ್ತಾಪನಾ? ಅಂತದ್ದೇನು ಇಲ್ಲ ಮಾರಾಯ.

ಮತ್ತೆ ಯಾಕೆ ಇತ್ತೀಚೆಗೆ ಇಬ್ಬರ ನಡುವೆ ಮಾತುಕತೆ ಒಂದೂ ಇಲ್ಲ. ಯಾವಾಗ್ಲು ಒಬ್ಬನೇ ರೂಮಲ್ಲೇ ಕೂತಿರ್ತೀಯ. ಅದೂ ಬೇರೆ ಏನೋ ಕುಟ್ಟುತ್ತಾ ಇರೋ ಶಬ್ಧ ಬೇರೆ ಬರ್ತಾ ಇರುತ್ತೆ ನಿನ್ನ ರುಮಿನಿಂದ ಯಾಕೊ ನಿನ್ನ ನಡವಳಿಕೇನೆ ವಿಚಿತ್ರ ಆಗಿದೆ ಮಗಾ ಇತ್ತೀಚೆಗೆ ಅಂದ.

ಇದನ್ನು ಕೇಳಿದ ಕೂಡಲೇ ಸ್ನೇಹಿತನ ದುಃಖದ ಕಟ್ಟೆ ಒಡೆದು ಅಳುವುದಕ್ಕೆ ಶುರು ಮಾಡಿದ. ಎಷ್ಟು ಸಮಾಧಾನ ಮಾಡಿದರೂ ಗಂಟೆಯವರೆಗೆ ಅವನ ಅಳು ನಿಲ್ಲಲೇ ಇಲ್ಲ. ಕೊನೆಗೆ ಹಾಗೆ ಹೀಗೆ ಅವನನ್ನು ಸಮಾಧಾನ ಮಾಡಿ ಯಾಕೆ ಅತ್ತಿದ್ದು ನಾನೇನಾದ್ರು ತಪ್ಪು ಕೇಳಿದ್ನಾ ಗೆಳೆಯ ಅಂತ ಕೇಳಿದ.

ಅದಕ್ಕೆ ಇವನು ಇಲ್ಲ ಕಣೋ ನೀನು ಕೇಳಿದ್ರಲ್ಲಿ ಯಾವ ತಪ್ಪೂ ಇಲ್ಲ. ನನ್ನ ಮತ್ತು ನನ್ನ ಹುಡುಗಿ ನಡುವೆ ಯಾವ ಮನಸ್ತಾಪನೂ ಇಲ್ಲ ಆದರೆ ನನ್ನ ಮತ್ತು ಅವಳ ನಡುವಿನ ಪ್ರೀತಿ ಸಹಿಸದವರಿಂದ ಕಣೋ ಪ್ರಾಬ್ಲೆಮ್ಮು ಆಗಿರೋದು, ಅಂದ.

ಅದಕ್ಕೆ ಇವನು ಯಾಕೆ ಮಗಾ ಹುಡುಗಿ ಮನೆಯವರಿಗೆ ಏನಾದ್ರೂ ಈ ವಿಷಯ ಗೊತ್ತಾಯ್ತ ಹೇಗೆ ಅಂತ ಕೇಳಲಾಗಿ.

ಇಲ್ಲ ಅವಳ ಮತ್ತು ನನ್ನ ಮನೆಯವರಿಂದ ಯಾವುದೇ ಪ್ರಾಬ್ಲಮ್ಮು ಇಲ್ಲ ಮಗಾ. ಇದಕ್ಕೆಲ್ಲಾ ಕಾರಣ ಅಂದ್ರೆ ನೆಟ್‌ವರ್ಕ್‌ನೋರು ಅಂದ. ಇನ್ನೊಬ್ಬನಿಗೆ ಆಶ್ಚರ್ಯ "ಏನು ನೆಟ್‌ವರ್ಕ್‌ನೋರಿಂದ ಪ್ರಾಬ್ಲೆಮ್ಮ, ಏನಾಯ್ತು" ಅಂತ ಆಶ್ಚರ್ಯದಿಂದ ಕೇಳಿದ.

ಹೌದು ಕಣೋ ಇತ್ತೀಚೆಗೆ ಕಾಲ್‌ರೇಟ್ ಬೇರೆ ಜಾಸ್ತಿ ಮಾಡಿಬಿಟ್ಟಿದಾರೆ ಮೊದಲು ಇದ್ದ ಹತ್ತು ಪೈಸೆಯ ಟಾರಿಫ್ ಈಗ ಇಲ್ಲ, ಅದಕ್ಕೇ ಮೊದಲಿನ ಹಾಗೆ ಈಗ ಕಾಲ್ ಮಾಡಿ ಮಾತಾಡೋಕೆ ಆಗ್ತಾ ಇಲ್ಲ" ಅಂದಿಂದು ಕೇಳಿ ಕುತೂಹಲದಿಂದ ಕುದಿಯುತ್ತಿದ್ದವನಿಗೆ ತಲೆ ತಿರುಗೋದೊಂದೆ ಬಾಕಿ, ಆದರು ಸಾವರಿಸಿಕೊಂಡು "ಮತ್ತೆ ಯಾಕೆ ನಿನ್ನ ರೂಮಿನಿಂದ ಕುಟು ಕುಟು ಅಂತಾ ಯಾವಾಗ್ಲು ಶಬ್ಧ ಕೇಳುತ್ತಾ ಇರುತ್ತೆ" ಅಂತ ಕೇಳಲಾಗಿ.

ಅದಾ ಮಗಾ ಕಾಲ್‌ರೇಟ್ ಜಾಸ್ತಿ ಆದಮೇಲೆ ಇಬ್ಬರೂ ಮಾತಾಡಿಕೊಂಡು ಮೆಸೇಜ್ ಆಫರ್ ಹಾಕಿಸಿಕೊಂಡಿದೀವಿ ಅದೂ ಬೇರೆ ನಂದು ನೋಕಿಯ ಡಬ್ಬಲ್ ಒನ್ ಡಬ್ಬಲ್ ಝೀರೋ ಸೆಟ್ ಅಲ್ವ ಮೆಸೇಜ್ ಟೈಪ್ ಮಾಡಬೇಕಾದ್ರೆ ಆ ಶಬ್ಧ ಬರೋದು ಅಂತ ಅವನು ಹೇಳಿದ್ದು ಕೇಳಿ, ಏನೋ ಸೀಕ್ರೆಟ್ ಇರಬಹುದು ಅಂತ ಕಾಯುತ್ತಿದ್ದ ಇನ್ನೊಬ್ಬನಿಗೆ ನಿಮ್ಮ ರೀತಿಯೇ ಭ್ರಮ ನಿರಸನ ಆಗಿದ್ದಂತೂ ಸುಳ್ಳಲ್ಲ.

ಓದು ಕಲಿತದ್ದು

ಇವತ್ತು ನನಗೆ ಅತ್ಯಂತ ಖುಶಿ ಕೊಡುವಂತಹ ದಿನ. ತುಂಬ ದಿನದಿಂದ ಹುಡುಕುತಿದ್ದ ಎ.ಆರ್ ಕೃಷ್ಣಶಾಸ್ತ್ರಿ’ಗಳ ’ವಚನ ಭಾರತ’ ಬೀದಿ ಬದಿಯ ಪುಸ್ತಕದಂಗಡಿಯಲ್ಲಿ ೫೦ರೂ’ಗೆ ಸಿಕ್ತು. ನಾನು ಐದನೇ ತರಗತಿಯಲ್ಲಿದ್ದಾಗ ಮೊದಲನೇ ಬಾರಿ ಓದಿ ಮುಗಿಸಿದ್ದ ಪುಸ್ತಕವದು. ಎಷ್ಟು ಬಾರಿ ಓದಿದರೂ ಕೂಡ ಮಹಾಭಾರತ ಹೊಸತೆಂಬಂತೆ ಕಣ್ಣೆದುರು ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಅದರಲ್ಲಿರೋ ಶಬ್ದಗಳ ಎಫೆಕ್ಟು ಅಂಥದ್ದು. ಆದಿ ಪರ್ವದಿಂದ ಸ್ವರ್ಗಾರೋಹಣ ಪರ್ವದವರೆಗೂ ಒಂದೇ ಗುಕ್ಕಿಗೆ ಮುಗಿಸಬಹುದಾದ ೩೬೮ ಪುಟಗಳ ಈ ಪುಸ್ತಕವೇ ನನಗೆ ಕನ್ನಡ ಪುಸ್ತಕಗಳನ್ನು ಓದುವ ಕಿಚ್ಚು ಹಚ್ಚಿದ್ದು. ನಂತರ ನೆಚ್ಚಿನ ತೇಜಸ್ವಿಯಿಂದ ಮುಂದುವರೆದು ಪಿ.ಯು.ಸಿ’ಗೆ ಬರುವಷ್ಟರಲ್ಲಿ ಭೈರಪ್ಪ, ಕುವೆಂಪು, ಕಾರಂತ’ರ ಪುಸ್ತಕಗಳೆಲ್ಲವೂ ನನ್ನಿಂದ ಓದಿಸಿಕೊಂಡಿದ್ದವು. ಕಥೆ ಕಾದಂಬರಿ ಹುಚ್ಚು ಎಷ್ಟರ ಮಟ್ಟಿಗೆ ಹತ್ತಿತ್ತು ಅಂದರೆ ನನ್ನಪ್ಪ ಟೆಕ್ಸ್ಟ್ ಬುಕ್ ಓದುತ್ತೀಯೋ ಇಲ್ಲೋ ಅಂತ ಬಾಸುಂಡೆಗಳ ಸುರಿಮಳೆಗೈದಿದ್ದರು. ಆದರೂ ಕದ್ದು ಮುಚ್ಚಿ ಟೆಕ್ಸ್ಟ್ ಬುಕ್ ಒಳಗಡೆ ಕಾದಂಬರಿ ಅಡಗಿಸಿ ಇಟ್ಟುಕೊಂಡು ಓದುತ್ತಿದ್ದೆ. ಪಿ.ಯು.ಸಿ ರಿಜೆಲ್ಟ್ ಬಂದಾಗ ಬೇರೆಯವರೆಲ್ಲಾ ಪ್ರಪಂಚ ತಲೆ ಮೇಲೆ ಬಿದ್ದವರ ಥರ ಓಡಾಡ್ತಾ ಇದ್ದರೆ ನಾನು ತೇಜಸ್ವಿಯವರ ’ಅಣ್ಣನ ನೆನಪು’ ಪುಸ್ತಕವನ್ನು ಅಟ್ಟದ ಮೇಲೆ ಕುಳಿತು ಓದಿದ್ದೆ.
ಪಿ.ಯು.ಸಿ’ಯಿಂದ ದೊಡ್ಡ ಪಾಠ ಕಲಿತು ಹೀಗಾದರೆ ಉದ್ಧಾರ ಆಗಲ್ಲ ಅಂತ ನನಗೇ ಅನ್ನಿಸಿ ಸಾಹಿತ್ಯ ಓದುವ ಹುಚ್ಚನ್ನು ಎಲ್ಲರಿಗೂ ಆಶ್ಚರ್ಯವಾಗೋ ರೀತಿ ಬಿಟ್ಟು ಬಿಟ್ಟಿದ್ದೆ. ಆಮೇಲೆ ಬಿ.ಎಸ್ಸಿ ಅದಾದ ಮೇಲೆ ಎಮ್.ಬಿ,ಎ, ರಿಸೆಶನ್ನು, ಕೆಲಸ ಅಂತ ತಲೆ ಕೆಡಿಸಿಕೊಂಡು ಸಾಹಿತ್ಯ ಮರೆತೇ ಹೋಗಿತ್ತು. ಇಂತಹ ಸಂದರ್ಭದಲ್ಲಿ ಮತ್ತೆ ಓದುವ ಆಭ್ಯಾಸ ಅದೇ ’ವಚನ ಭಾರತ’ದಿಂದಲೇ ಶುರು ಮಾಡಬೇಕು ಅನ್ನುವ ಕೊರೆತ ಮನಸಿನಲ್ಲಿ ಇದ್ದೇ ಇತ್ತು. ಪುಸ್ತಕ ಮಳಿಗೆಗಳನ್ನೆಲ್ಲಾ ಜಾಲಾಡಿದ್ದರೂ ಈ ಪುಸ್ತಕ ಮಾತ್ರ ಸಿಕ್ಕಿರಲಿಲ್ಲ. ಅಂತದ್ದರಲ್ಲಿ ತಮ್ಮನೊಂದಿಗೆ ಸಂಜೆ ಹೊರಗಡೆ ಹೋದಾಗ ಬೀದಿ ಬದಿಯಲ್ಲಿ ಸಿಗಬೇಕೇ. ಸ್ವರ್ಗ ಸಿಕ್ಕಷ್ಟೇ ಸಂತೋಷವಾಗಿ ಒಳಗೊಳಗೇ ಮನಸ್ಸು ಕುಣಿದಾಡಿ ಗ್ಯಾಂಗ್ನಂ ಡಾನ್ಸ್ ಮಾಡಿತು.

ಭಾನುವಾರ, ಮಾರ್ಚ್ 24, 2013

ಅವಳು ಕೇಳಿದ್ದು-ಇವನು ಕೊಟ್ಟಿದ್ದು



ಅವಳೊಮ್ಮೆ ತನಗೆ ಬಂಗಾರದ್ದೇನಾದರು ಕೊಡಿಸಿ ಅಂತ ಕೇಳಿದಳು ಅದಕ್ಕಿವನು ತನ್ನ ಬಂಗಾರದಂತ ಹೃದಯವನ್ನೇ ನಿನಗೆ ಕೊಟ್ಟಾಗಿದೆಯಲ್ಲೇ ಅಂದ.
ಮತ್ತೊಂದು ದಿನ ಮುತ್ತಿನ ಓಲೆ ನೋಡಿ ಅಂತಹದ್ದೇ ನನಗೆ ಬೇಕು ಕೊಡಿಸಿ ಅಂದಳು, ಒಂದು ಸಿಹಿ ಮುತ್ತು ಕೊಟ್ಟು ಇವನು ಮುಗುಳ್ನಗೆ ಸೂಸಿದ್ದ.
ವಿಮಾನದಲ್ಲಿ ಕರ್ಕೊಂಡು ಹೋಗಿ ಒಮ್ಮೆ ಅಂತ ಕೇಳಿದ್ದ ಅವಳನ್ನು ವಿಮಾನಗಳು ತಲೆ ಮೇಲೆಯೇ ಇಳಿದಂತೆ, ಹಾರುವಂತೆ ಭಾಸವಾಗುವ ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪದ ಜಾಗದ ಹೈವೇಯಲ್ಲಿ ಗಾಡಿ ನಿಲ್ಲಿಸಿ ಹತ್ತಿರದಲ್ಲೇ ಹಾರಾಡುವ ವಿಮಾನಗಳನ್ನು ತೋರಿಸಿದ್ದ.
ಸ್ವರ್ಗವನ್ನು ನೋಡಬೇಕೆಂದವಳಿಗೆ ನಾಲ್ಕು ಗೋಡೆಯ ಮಧ್ಯೆ ಶಯನ ಗೃಹದಲ್ಲೇ ಸ್ವರ್ಗವನ್ನು ಧರೆಗಿಳಿಸಿದ್ದ.
ಲೇಟೆಸ್ಟ್ ಡಿಸೈನರ್ ವೇರ್ ಕೊಡಿಸಿ ಅಂದವಳಿಗೆ ಹುಟ್ಟುಡುಗೆಯನ್ನೇ ಮೈ ತುಂಬಾ ಉಡಿಸಿ, ಅವಳ ಪ್ರತಿಬಿಂಬವನ್ನು ಕನ್ನಡಿಯಲ್ಲಿ ತೋರಿಸಿ ಚಂದ ಕಾಣ್ತಿದಿಯ ಕಣೇ ಅಂತ ಅವಳನ್ನು ಹೊಗಳಿ ಸಂತೋಷಪಟ್ಟಿದ್ದ.
ಮಳೆಯಲ್ಲಿ ನೆನೆಯೋ ಆಸೆಯಾಗ್ತಿದೆ ಅಂತ ಅವಳು ಹೊರಗೆ ಬರುತ್ತಿದ್ದ ಮಳೆ ತೋರಿಸಿ ಹೇಳಿದಾಗ ಮಳೆಯಲ್ಲಿ ನೆನೆದರೆ ಆರೋಗ್ಯ ಕೆಡುತ್ತೆ ಬಂಗಾರಿ ಅಂತ ತನ್ನ ಪ್ರೀತಿಯ ಮಳೆಯಲ್ಲೇ ತೋಯಿಸಿ ತೊಪ್ಪೆಯಾಗಿರಿಸಿದ್ದ.

ಒಂದು ದಿನ ಅವಳು ಅವನಿಗೆ ನಿನ್ನ ಪ್ರೀತಿ ಬರೀ ಬೂಟಾಟಿಕೆ, ನಾನು ಕೇಳಿದ ಒಂದನ್ನೂ ಇದುವರೆಗೆ ನೀನು ಕೊಡಿಸಲೇ ಇಲ್ಲ. ನಾನು ಕೇಳಿದ್ದೊಂದಾದರೆ ನೀನು ಮಾಡೋದೇ ಒಂದು ಅಂತ ಚುಚ್ಚಿದಳು.

ಅವಳು ಕೇಳಿದ್ದಕ್ಕಿಂತ ಹೆಚ್ಚಿನದನ್ನೇ ಕೊಟ್ಟಿದ್ದೇನೆ, ತಾನು ತಪ್ಪಿದ್ದಾದ್ರು ಎಲ್ಲಿ ಅಂತ ಯೋಚಿಸಿ ಯೋಚಿಸಿ ಖಿನ್ನನಾದ.

ಅಂದಿನಿಂದ ಅವನು ತನ್ನಾಕೆಯ ಆಸೆಗಳನ್ನು ಪೂರೈಸಲು ಶಕ್ತಿ ಮೀರಿ ಪ್ರಯತ್ನಿಸತೊಡಗಿದ. ತನ್ನ ಆಸೆಗಳನ್ನು ಸಂಪೂರ್ಣವಾಗಿ ಅವಳಿಗಾಗಿ ಕೊಂದುಕೊಂಡ.

ಅವಳಿಗೆ ತನ್ನ ಗಂಡ ತುಂಬಾ ಯಾಂತ್ರಿಕನಾಗಿದ್ದಾನೆ ಅನ್ನಿಸತೊಡಗಿದೆ. ಕೇಳಿದ್ದೆಲ್ಲ ಕೊಡಿಸುತ್ತಿದ್ದರೂ ಕೂಡ ಅದರಲ್ಲಿ ಮುಖ್ಯವಾಗಿ ಇರಬೇಕಿದ್ದ ಪ್ರೀತಿಯ ಮಿಶ್ರಣವೇ ಮಾಯವಾಗಿದೆ.

ನೀನೇಕೆ ನನ್ನೊಂದಿಗೆ ಮಾತಾಡೋದೆ ಕಡಿಮೆ ಆಗಿದೆ ಅಂತ ಒತ್ತಾಯಪೂರ್ವಕವಾಗಿ ಅವನನ್ನು ಕೇಳಿದವಳಿಗೆ ತನ್ನ ಹೃದಯ ಬಡಿತ ಕೇಳಿಸಿ ಹೆದರಬೇಡ ಬದುಕಿದ್ದೇನೆ ಅಂದಿದ್ದ.

ಅವನ ಬದಲಾದ ವರ್ತನೆಗಳು ಅವಳಿಗೆ ಯಕ್ಷಪ್ರಶ್ನೆಯಾಗಿ ಉಳಿದಿದೆ. ಅವನನ್ನು ಮೊದಲಿನ ಸ್ಥಿತಿಗೆ ತರುವುದು ಹೇಗೆ ಎಂದು ಯೋಚಿಸಿ ಕೃಶಳಾಗುತ್ತಾ ಸಾಗಿದ್ದಾಳೆ.

ಅವನೂ ಕೂಡ ಅವಳು ಕೇಳಿದ್ದೆಲ್ಲಾ ಕೊಡಿಸಿದರೂ ಹೀಗೇಕೆ ಆಗುತ್ತಿದ್ದಾಳೆ ಎನ್ನುವ ಉತ್ತರ ಗೊತ್ತಾಗದೆ ಇಂಚಿಂಚಾಗಿ ತನ್ನನ್ನು ತಾನು ಕೊಲೆ ಮಾಡುತ್ತಾ ಸಾಗಿದ್ದಾನೆ.

ಇಬ್ಬರ ಮಧ್ಯೆ ಗೋಡೆಯಂತು ದಟ್ಟವಾಗಿ ಬೆಳೆದಾಗಿದೆ. ತಮ್ಮ ನಡುವೆ ಆದ ತಪ್ಪಾದರೂ ಏನು ಎನ್ನುವುದು ಇಬ್ಬರಿಗೂ ಇದುವರೆಗು ತಿಳಿದಿಲ್ಲ.    

ಬುಧವಾರ, ಮಾರ್ಚ್ 20, 2013

ನಂದಿ ಬೆಟ್ಟವೂ, ಇನ್ಶ್ಯೂರೆನ್ಸೂ

ಸ್ವಲ್ಪ ದಿನಗಳ ಹಿಂದೆ ಏನೋ ಕೆಲಸದ ಮೇಲೆ ದೇವನಹಳ್ಳಿಗೆ ಹೋಗಿದ್ದೆ. ಸ್ವಲ್ಪ ಸಮಯ ಉಳಿದಿದ್ದರಿಂದ ಅಲ್ಲೇ ಹತ್ತಿರದ ನಂದಿ ಬೆಟ್ಟ ನೋಡೋಣ ಅಂತ ಅಂದ್ಕೊಂಡು ಹೊರಟೆ. ಬೆಟ್ಟದ ತುದಿ ತಲುಪಿದಾಗ ಮಟ ಮಟ ಮದ್ಯಾಹ್ನ ಹನ್ನೆರಡಾಗಿತ್ತು. ಟಿಕೆಟ್ ಕೌಂಟರಿಗೆ ಹೋಗಿ ಒಂದು ಟಿಕೆಟ್ ಕೊಡಿ ಅಂತ ಕೇಳಿದೆ. ಟಿಕೆಟ್ ಕೊಡೋನು ನಖಶಿಖಾಂತ ಮೇಲಿಂದ ಕೆಳಗೆ ನೋಡಿ ’ಏನ್ ಪ್ರಾಬ್ಲಮ್ಮು ಸ್ವಾಮಿ ಸಂಬಳ ಸಾಲ್ತಾ ಇಲ್ವ’ ಅಂತ ಕೊಂಕು ನಗೆ ಬೀರಿ ಕೇಳಿದ. ಅವನು ಯಾಕೆ ಆ ರೀತಿ ಕೇಳಿದ್ದು ಅಂತ ಅರ್ಥ ಆಗದೆ ’ಏನೋ ಪರ್ವಾಗಿಲ್ಲ ಕಣ್ರೀ ಬರೋ ಸಂಬಳದಲ್ಲಿ ಡೀಸೆಂಟ್ ಆಗಿ ಜೀವನ ಮಾಡಬಹುದು’ ಅಂತ ಹೇಳಿ ಟಿಕೆಟ್ ಇಸ್ಕೊಂಡು ಗೇಟ್ ಹತ್ರ ಹೋದೆ. ಟಿಕೆಟ್ ಕೇಳಿದ ಸೆಕ್ಯುರಿಟಿಗೆ ತಗೊಂಡಿದ್ದ ಟಿಕೆಟ್ ತೋರಿಸಿ ಒಳಗೆ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಏನು ಒಬ್ರೇನಾ? ಅಂತ ನಾನೇನೋ ದೊಡ್ಡ ತಪ್ಪು ಮಾಡಿರೋ ಥರ ಕೇಳ್ದ. ಹೌದು ಸ್ವಾಮಿ ನಾನು ಒಬ್ಬನೇ ಬಂದಿರೋದು ಅಂತ ಪ್ರಶ್ನಾರ್ಥಕವಾಗಿ ಅವನ ಕಡೆ ನೋಡಿದೆ. ಅದಕ್ಕೆ ಅವನು ’ಹಾಗಾದ್ರೆ ವಾಪಸ್ಸು ಹೋಗಿ, ಒಳಗೆ ಬಿಡೋದಿಲ್ಲ’ ಅಂದ. ಅವರ ವಿಚಿತ್ರ ನಡವಳಿಕೆಯನ್ನು ಅದುವರೆಗೂ ನೋಡಿದ ನಾನು ’ಯಾಕ್ರಿ ಬಿಡೋದಿಲ್ಲ, ನಾನೇನು ಟಿಕೆಟ್ ತಗೊಂಡಿಲ್ವ’ ಅಂತ ಟಿಕೆಟ್ ಅನ್ನು ಅವನ ಮುಖಕ್ಕೆ ಹಿಡಿದೆ. ಅದಕ್ಕೆ ಅವನು ’ನೋಡ್ರಿ ಇಲ್ಲಿ ಟಿಕೆಟ್ಟಿನ ಪ್ರಶ್ನೆ ಅಲ್ಲ ಇರೋದು, ನಾವು ಆತ್ಮಹತ್ಯೆ ಮಾಡಿಕೊಳ್ಳೋಕೆ ಬಂದವರನ್ನು ಒಳಗೆ ಬಿಡೋದಿಲ್ಲ’ ಅಂತ ಗಬ್ಬರ್ ಸಿಂಗ್ ಸ್ಟೈಲಿನಲ್ಲಿ ಹೇಳಿದ. ಅವನ ಮಾತನ್ನು ಕೇಳಿದ ನಾನು ಕ್ಷಣ ಕಾಲ ದಂಗಾದೆ. ’ಏನು ಆತ್ಮಹತ್ಯೆ ಮಾಡಿಕೊಳ್ಳೋದ ನಾನು’ ಅಂತ ಗಾಬರಿಯಿಂದ ಹೇಳಿದೆ. ಅದಕ್ಕೆ ಅವನು ’ಹೌದ್ರಿ ಇಲ್ಲಿಗೆ ಒಬ್ಬೊಬ್ಬರೆ ಬರೋದೇ ಆತ್ಮಹತ್ಯೆ ಮಾಡಿಕೊಳ್ಳೋಕೆ’ ಅಂತ ಅಷ್ಟೇ ದೃಢವಾಗಿ ಹೇಳಿದ. ’ನನ್ನನ್ನು ನೋಡಿದ್ರೆ ನಿಮಗೆ ಸೂಸೈಡ್ ಮಾಡಿಕೊಳ್ಳೋಕೆ ಬಂದವರ ಥರ ಕಾಣ್ತೀನೇನ್ರಿ’ ಅಂದದ್ದಕ್ಕೆ. ’ಹತ್ತು ದಿವಸದ ಹಿಂದೆ ನಿಮಗಿಂತ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡಿದ್ದವನು ಬಂದಿದ್ದ ಸ್ವಾಮಿ, ಸಾಫ್ಟ್ ವೇರ್ ಎಂಜಿನೀಯರಂತೆ. ಅರವತ್ತು ಸಾವಿರ ಸಂಬಳ ತಗೋತೀನಿ ನಾನು ನಾನ್ಯಾಕೆ ಸಾಯಲಿ ಅಂತ ವಾದಿ ಮಾಡಿ ಒಳಗೆ ಹೋದೋನು ಟಿಪ್ಪು ಡ್ರಾಪಿನಿಂದ ಬಿದ್ದು ಸತ್ತಿದಾನೆ, ಇದಕ್ಕೆ ಏನ್ಹೇಳ್ತೀರಿ’ ಅನ್ನುತ್ತಾ ಸತ್ತವನು ನಿಲ್ಲಿಸಿದ್ದ ಅನಾಥ ಬೈಕನ್ನು ತೋರಿಸುತ್ತ ಹೇಳಿದ. ’ರೀ ಸ್ವಾಮಿ ಸಾಯೋಕೆ ಇಲ್ಲಿಗೇ ಬರಬೇಕೇನ್ರಿ, ಸಾಯೋರು ಎಲ್ಲಾದ್ರು ಸಾಯ್ತಾರೆ….. ನಾನು ಕೆಳ ತಿಂಗಳಿನ ಹಿಂದೆ ಅಷ್ಟೆ ಮದುವೆ ಆಗಿರೋದು ಜೀವನದಲ್ಲಿ ಇನ್ನು ಮಾಡಬೇಕಾಗಿರೋದು ಬೇಕಾದಷ್ಟು ಇದೆ’ ಅವನನ್ನು ಖಂಡಿಸುತ್ತಾ ಹೇಳಿದೆ. ಅದಕ್ಕೆ ಅವನು ’ಏನು ರೀಸೆಂಟಾಗಿ ಮದುವೆ ಆಗಿದೀರಾ? ಹಾಗಾದ್ರೆ ಇದಕ್ಕಿಂತ ಬೇರೆ ಕಾರಣ ಬೇಕಾ ಸಾಯೋಕೆ’ ಅಂತ ಹೇಳಬೇಕೆ?. ಇನ್ನು ಇವನ ಹತ್ರ ಮಾತಾಡೋದು ವೇಷ್ಟು ಅನ್ನಿಸಿದ್ರು ಕೂಡ ಕೊನೆಯ ಅಸ್ತ್ರವಾಗಿ ’ನೀವು ಕೂಡ ಮದುವೆ ಆಗಿರೋರೆ ಅಲ್ವ ಹಾಗಂತ ನೀವು ಸೂಸೈಡ್ ಮಾಡಿಕೊಂಡಿದೀರಾ’ ಅಂತ ಕೇಳ್ದೆ. ’ಹೋಗಿ, ಹೋಗಿ ಸ್ವಾಮಿ ನಿಮ್ಮ ಕೆಲ್ಸ ನೋಡ್ಕೊಳ್ಳಿ ನಾನು ನನ್ನ ಹೆಂಡ್ತಿ ಹತ್ರ ಪ್ರತಿ ದಿನ ಸತ್ತು ಬದುಕ್ತಾ ಇದೀನಿ ನನ್ನ ಕಷ್ಟ ಯಾರಿಗೆ ಹೇಳಲಿ’ ಅಂದ. ನನ್ನ ಹೆಂಡತಿ ನನ್ನ ಜೊತೆ ಆ ಕ್ಷಣ ಇರದಿದ್ದಕ್ಕೆ ಬೇಜಾರು ಆದ್ರು ಕೂಡ ಹಿಂತಿರುಗಿಸಿದ ಟಿಕೆಟ್ಟಿನ ದುಡ್ಡು ಪಡೆದುಕೊಂಡು ಹೋದ ದಾರಿಯಲ್ಲೇ ಬೆಂಗಳೂರಿಗೆ ವಾಪಸ್ಸು ಬಂದಿದ್ದೆ.

ನಾನು ನಂದಿಬೆಟ್ಟಕ್ಕೆ ಹೋಗಿದ್ದ ಗಳಿಗೆ ಸರಿ ಇರಲಿಲ್ಲವೇನೋ ಅಂತ ಅನ್ಸುತ್ತೆ. ಯಾಕಪ್ಪ ಅಂದ್ರೆ ಮೊನ್ನೆ ನನ್ನ ಸ್ನೇಹಿತ ಒಬ್ಬ ಕಾಲ್ ಮಾಡಿದ್ದ. ಎಂಬಿಎ ಮುಗಿದ ಮೇಲೆ ಎಲ್ಲರೂ ಒಂದಲ್ಲ ಒಂದು ರೀತಿ ಟಚ್ಚಿನಲ್ಲಿ ಇದ್ರೂ ಈ ಆಸಾಮಿ ಮಾತ್ರ ಪತ್ತೆನೇ ಇರ್ಲಿಲ್ಲ. ಹೀಗೆ ಫ್ರೆಂಡ್ಸ್ ಜೊತೆ ಮಾತಾಡ್ತಾ ಇದ್ದಾಗ ಇವನು ಯಾವ್ದೋ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡ್ತಿದಾನೆ ಅಂತ ಹೇಳಿದ್ರು. ಅವನ ಹೆಸರಿನಲ್ಲೇ ಮೂರ್ನಾಲ್ಕು ನಂಬರುಗಳು ಸೇವ್ ಆಗಿದ್ರು ಒಂದು ನಂಬರ್ ಕೂಡ ವರ್ಕ್ ಆಗ್ತಾ ಇರ್ಲಿಲ್ಲ ಕೊನೆಗೆ ಅವನ ಅಸ್ತಿತ್ವವನ್ನೇ ಮರೆತುಬಿಟ್ಟಿದ್ದೆ. ಇಂತಹ ಆಸಾಮಿ ಮೂರು ವರ್ಷಗಳ ಬಳಿಕ ಕಾಲ್ ಮಾಡಿದ್ದರಿಂದ ಆಶ್ಚರ್ಯದ ಜೊತೆ ಗಾಬರಿಯೂ ಆಗಿತ್ತು ಯಾಕಂದ್ರೆ ಏನೂ ವಿಷಯ ಇಲ್ಲ ಅಂದ್ರೆ ಕಾಲ್ ಮಾಡೋ ಮನುಷ್ಯ ಅಲ್ವೇ ಅಲ್ಲ ಅವನು. ಅವನ ಧ್ವನಿ ಮಾತ್ರ ಮೂರು ವರ್ಷಗಳ ಬಳಿಕವೂ ಇನ್ನೂ ಹಾಗೇ ಇದ್ದಿದ್ರಿಂದ ನಾನು ಕೂಡಲೇ ಪತ್ತೆ ಹಚ್ಚಿ “ಏನೋ ಮಗಾ ಇಷ್ಟು ವರ್ಷ ಆದ ಮೇಲೆ ಕಾಲ್ ಮಾಡಿದೀಯ ಎಲ್ಲಿದೀಯ, ಹೇಗಿದೀಯ” ಅಂತ ಕುಶಲೋಪರಿ ಪ್ರಶ್ನೆ ಬಿಸಾಕಿ ಉತ್ತರಕ್ಕಾಗಿ ಕಾದು ನಿಂತೆ. “ನಂದು ಬಿಟ್ಟಾಕು ಸಿಸ್ಯಾ ಏನೋ ವಿಚಾರ ಕೇಳ್ದೆ ನಿಜಾನ?” ಅಂತ ಕೇಳ್ದ. ನಾನು ಮದುವೆ ಆಗಿರೋ ವಿಚಾರ ಇರಬಹುದು ಅಂತ “ಸಾರಿ ಮಗಾ ನಿನ್ನ ಮೊಬೈಲ್ ನಂಬರ್ ಇರ್ಲಿಲ್ಲ ಅದಕ್ಕೆ ನನ್ನ ಮದುವೆಗೆ ಕರಿಯೋಕೆ ಅಗಿರ್ಲಿಲ್ಲ” ಅಂದೆ. “ಹಳೇ ವಿಚಾರ ಹೇಳ್ಬೇಡ ನಂಗೆ, ನೀನು ಸೂಸೈಡ್ ಮಾಡ್ಕೊಳ್ಳೋಕೆ ನಂದಿಬೆಟ್ಟಕ್ಕೆ ಹೋಗಿದ್ಯಂತೆ ಹೌದಾ? ಕೇಳಿ ಶಾಕ್ ಆಯ್ತು ಅದಕ್ಕೆ ಕಾಲ್ ಮಾಡಿದ್ದು” ಅಂತ ಹೇಳ್ದ. ನನಗೋ ಇದ್ಯಾವ ಹೊಸ ಸಮಸ್ಯೆ ಸಿವನೇ ಅಂದ್ಕೊಂಡೆ ಆದ್ರೆ ಇನ್ನೂ ದೊಡ್ಡ ಪೀಕಲಾಟ ಶುರು ಆಗಿದ್ದು ಆಮೇಲೆ. “ಇಲ್ಲ ಕಣಪ್ಪಾ ನಾನೊಬ್ನೇ ನೋಡೋಣ ಅಂತಾ ಹೋಗಿದ್ದೆ, ಏನೋ ಮಿಸ್ ಅಂಡರ್ಸ್ಟಾಂಡಿಂಗು ಒಳಗೆ ಬಿಡಲಿಲ್ಲ” ಅಂತ ಕೂಲಾಗೇ ಹೇಳಿದೆ. “ಇಷ್ಟು ದೊಡ್ಡ ವಿಶ್ಯಾ ಎಷ್ಟು ನಾರ್ಮಲ್ಲಾಗಿ ಹೇಳ್ತಾ ಇದೀಯಾ, ಮಗಾ ನಾನು ಅರ್ಜೆಂಟಾಗಿ ನಿನ್ನ ಮೀಟ್ ಮಾಡ್ಬೇಕು ಎಲ್ಲಿಗೆ ಬರ್ಲಿ ಹೇಳು ನಾನು ನಿನ್ನ ಅಷ್ಟು ಈಜಿಯಾಗಿ ಸಾಯೋಕೆ ಬಿಡೊಲ್ಲ” ಅಂದ. ನಾನು “ಥೂ ನಿನ್ನ ತುಂಬಾ ದಿವಸದ ಮೇಲೆ ಕಾಲ್ ಮಾಡಿ ಬರೀ ಅಪಶಕುನದ ಮಾತಾಡ್ತಿಯಲ್ಲೋ ಶುನಕ ಮುಂಡೇದೆ” ಅಂತ ಥೇಟ್ ಬ್ರಾಹ್ಮಣರ ಸ್ಟೈಲಿನಲ್ಲಿ ಬೈದು ಬಂದು ತಲೆ ತಿನ್ನೋದೇನು ಬೇಡ ಮಾರಾಯ ಅಂದ್ರೂ ಕೇಳದೆ ಬಂದು ನೋಡಲೇ ಬೇಕು ಅಂತ ಹಠ ಹಿಡಿದ. ಸ್ನೇಹಿತನಾದ ನನ್ನ ಮೇಲೆ ಎಷ್ಟು ಪ್ರೀತಿ ಇಟ್ಕೊಂಡಿದಾನಲ್ಲ ಇವನಂತಹ ಹಿತೈಶಿಯನ್ನು ಪಡೆದ ನಾನೇ ಧನ್ಯ ಅಂತ ಒಳಗೊಳಗೇ ಹೆಮ್ಮೆ ಪಟ್ಟು “ನಾಳೆ ಹನ್ನೆರಡರೊಳಗೆ ಆಫೀಸಿಗೆ ಬಾ ಮಾರಾಯ” ಅಂತ ಆಫೀಸಿನ ಅಡ್ರೆಸ್ಸು ಕೊಟ್ಟೆ.
ಮರುದಿನ ಹತ್ತಕ್ಕೆ “ನಿಮ್ಮನ್ನು ನೋಡಲು ಯಾರೋ ಬಂದಿದಾರೆ” ಅಂತ ಆಫೀಸ್ ಬಾಯ್ ಹೇಳಿದ್ದಕ್ಕೆ ನೋಡಲಾಗಿ ಆ ನನ್ನ ಸ್ನೇಹಿತನ ರೂಪದ ನಕ್ಷತ್ರಿಕ ಆಸೀನನಾಗಿದ್ದ. ಮೊದಲು ಬೆಂಗಳೂರು, ಟ್ರಾಫಿಕ್ಕು, ಹುಡುಗೀರು, ಕ್ಲಾಸ್ ಮೇಟ್ಸು ಅಂತ ಏನೇನೋ ಮಾತಾಡಿ ಕೊನೆಗೆ ಹೇಗಿದೆ ನಿನ್ನ ಲೈಫು ಅಂತ ಅವನು ನನ್ನನ್ನು ಕೇಳಿದ ಮೇಲೆ ಏನೋ ವಿಷಯಕ್ಕೆ ಪೀಠಿಕೆ ಹಾಕ್ತಾ ಇದಾನೆ ಇವನು ಅಂತ ನನಗೆ ಅನ್ನಿಸಿ “ಲೈಫು ಮದುವೆ ಆದ ಮೇಲೆ ಸೋಪರ್ರಾಗಿ, ಕಲರ್ ಫುಲ್ಲಾಗಿ ಇದೆ ಮಗಾ, ಐ ಯಾಮ್ ಜಷ್ಟ್ ಎಂಜಾಯಿಂಗ್ ಮೈ ಲೈಫ್ “ಅಂತ ಹೇಳಿದೆ. ಅದಕ್ಕೆ ಅವನು ಇಲ್ಲ ಕಣೋ ಸಮ್ ಥಿಂಗ್ ಈಸ್ ನಾಟ್ ಅಟ್ ಆಲ್ ರೈಟ್, ಇಲ್ಲ ಅಂದ್ರೆ ಸೂಸೈಡ್ ಮಾಡ್ಕೊಳ್ಳೋಕೆ ಹೋಗ್ತಾ ಇರ್ಲಿಲ್ಲ ನೀನು, ಅದು ಸರಿ ಯಾವುದಾದ್ರು ಇನ್ಶೂರೆನ್ಸ್ ಮಾಡಿಸಿದೀಯ ನೀನು” ಅಂದ. ಅಲ್ಲಿಗೆ ಇವನ ಉದ್ಧೇಶ ಏನು ಅನ್ನೋದು ನನಗೆ ಸ್ಪಷ್ಠವಾಗಿತ್ತು. “ಲೇ, ಸುತ್ತಿ ಬಳಸಿ ಮಾತಾಡ್ಬೇಡ, ಇನ್ಶ್ಯೂರೆನ್ಸ್ ಮಾಡ್ಸು ಅಂತ ಡೈರೆಕ್ಟಾಗಿ ಕೇಳು ಮಾರ್ಕೆಟಿಂಗ್ ಮಾಡೋವ್ರ ಹತ್ರನೇ ಇವೆಲ್ಲಾ ಟ್ರಿಕ್ಸ್ ಬ್ಯಾಡೋ ಸಿಸ್ಯಾ” ಅಂದೆ. “ಪುರು ನೀನು ತುಂಬಾ ಶಾರ್ಪ್ ಕಣೋ ನನ್ನ ಕಂಪ್ನಿದು ಒಂದು ಒಳ್ಳೆ ಇನ್ಶ್ಯೂರೆನ್ಸ್ ಪಾಲಿಸಿ ಪ್ಲಾನ್ ಇದೆ, ಒಂದು ಪಾಲಿಸಿ ಮಾಡ್ಸು ಮಗಾ ಅಟ್ ಲೀಸ್ಟ್ ಐದು ಲಕ್ಷದ್ದು ಆಮೇಲೆ ನೀನು ಹೇಗೆ ಬೇಕಾದ್ರು ಸಾಯಿ ಮಗಾ ನಿನ್ನ ನಂಬಿಕೊಂಡವ್ರಿಗೆ ತೊಂದ್ರೆ ಇರೊಲ್ಲ” ಅಂದ. ಅದೇನು ಹೇಳಪಾ ಪಾಲಿಸಿ ಪ್ಲಾನು, ನಾನು ಒಂದು ಪಾಲಿಸಿ ಮಾಡಿಸಬೇಕು ಅಂತ ಇದ್ದೆ” ಅಂದೆ. ಆಮೇಲೆ ಅವನು ಹೇಳಿದ್ದನ್ನು ಇದ್ದ ಹಾಗೆ ನಿಮ್ಮ ಮುಂದೆ ಇಡ್ತಾ ಇದೀನಿ, “ನೋಡು ಮಗಾ ನಿನಗೆ ಈಗೆ ೨೮ ವಯಸ್ಸು, ವರ್ಷಕ್ಕೆ ೨೪ ಸಾವಿರ ಕಟ್ಟುತ್ತಾ ಹೋಗು, ೨೦ ವರ್ಷದವರೆಗೂ ಕಟ್ಟಿದರೆ ಒಟ್ಟು ಮೊತ್ತದ ಜೊತೆಗೆ ೧೦% ಬಡ್ಡಿನೂ ಸಿಗುತ್ತೆ, ಇನ್ನೂ ಒಂದು ಬೆನಿಫಿಟ್ ಇದೆ ಕಣೋ, ನೀ ಮೊದಲನೇ ಕಂತು ಕಟ್ಟಿ ಮರುದಿನವೇ ಸಾಯಿ ಪರ್ವಾಗಿಲ್ಲ ಇಪ್ಪತ್ತು ವರ್ಷದ ಫುಲ್ ಅಮೌಂಟ್ ಒಟ್ಟಿಗೆ ಸಿಗುತ್ತೆ” ಅಂದ. “ಥೂ ನಿನ್ನ, ಬರೀ ಸಾಯೋದೇ ಮಾತಾಡ್ತೀಯಲ್ಲೋ, ಒಳ್ಳೇ ಮಾತು ಬರಲ್ವಾ ನಿನ್ನ ಬಾಯಲ್ಲಿ” ಅಂದೆ. ಅದಕ್ಕೆ ಅವನು “ಸಾರಿ ಕಣೋ ನಿನ್ನ ಮನಸ್ಸಿಗೆ ಬೇಜಾರಾಯ್ತು ಅನ್ಸುತ್ತೆ, ನೀನು ಸಾಯ್ಲಿಲ್ಲ ಅಂತನೇ ತಿಳ್ಕೋ, ಬರೀ ಕೈ ಅಥವಾ ಕಾಲು ಮುರೀತು ಅಂತ ತಿಳ್ಕೋ ನಿನಗೆ ಟೋಟಲ್ ದುಡ್ಡಿನಲ್ಲಿ ೪೦% ಸಿಗುತ್ತೆ ಮಗಾ, ಈ ಆಫರ್ ನಮ್ಮ ಕಂಪನೀಲಿ ಮಾತ್ರ ಇರೋದು” ಅಂತ ಏನೋ ದೊಡ್ಡ ಫೇವರ್ ಮಾಡ್ತಾ ಇರೋರ ಥರ ಪೋಸು ಕೊಡ್ತಾ ಹೇಳಿದ. ಆ ಕ್ಷಣದಲ್ಲಿ ಅವನು ನನ್ನ ಕಣ್ಣಿಗೆ ಕೈಗೆ ಇಷ್ಟು, ಕಾಲಿಗೆ ಇಷ್ಟು ಅಂತ ಮಾತಾಡೋ ಸುಪಾರಿ ಕಿಲ್ಲರ್ ಥರ ಕಂಡಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಕೊನೆಗೆ ಅವನು ಹೇಳಿದ ಒಂದು ಮಾತು ಕೇಳಿ ತುಂಬಾ ಉರಿದು ಹೋಯ್ತು, ಅದೇನು ಅಂದ್ರೆ “ಮಗಾ ಪಾಲಿಸಿ ಮಾಡಿಸಿದ ಮೇಲೆ ಬೆಟ್ಟದ ಮೇಲಿಂದ ಬಿದ್ದು, ವಿಷ ಕುಡಿದು, ನೇಣು ಹಾಕ್ಕೊಂಡು ಸಾಯೋಕೆ ಹೋಗ್ಬೇಡ ಅದ್ರಿಂದ ಜಸ್ತಿ ಹಣದ ರಿಟರ್ನ್ಸ್ ಸಿಗೊಲ್ಲ ಅದರ ಬದಲು ಅಕಸ್ಮಾತ್ತಾಗಿ ಸತ್ತ ರೀತಿ ಯವುದಾದ್ರು ಲಾರಿ ಕೆಳಗೆ ಬಿದ್ದು ಸಾಯಿ ಅದ್ರಿಂದ ಫುಲ್ ಅಮೌಂಟ್ ಸಿಗುತ್ತೆ” ಅನ್ನಬೇಕೆ? ಅಲ್ಲಿವರೆಗೂ ಸಮಾಧಾನದಿಂದ ಕೇಳ್ತಾ ಇದ್ದ ನನ್ನ ತಾಳ್ಮೆಯ ಕಟ್ಟೆ ಒಡೆದುಹೋಯ್ತು, ಆಫೀಸಿನ ಕಾಫಿಯನ್ನೂ ಅವನಿಗೆ ಕುಡಿಸದೆ “ನೀನೇ ಸಾಯಿ ಮಗ್ನೇ ನಿನ್ನ ಮನೆಯೋರಿಗೇ ಲಕ್ಷಗಟ್ಟಲೆ ದುಡ್ಡು ಸಿಗಲಿ, ನಿನ್ನ ಕಂಪನಿ ಇನ್ಶ್ಯೂರೆನ್ಸ್ ದುಡ್ಡಿಗೋಸ್ಕರ ನಾನು ಸಾಯ್ಬೇಕಾ” ಅಂತ ಬಯ್ದು ಸಿಟ್ಟಿನಿಂದ ಎದ್ದು ನಾನು ಒಳಗೆ ಹೋದುದನ್ನು ಆಫೀಸಿನ ಕೊಲೀಗ್ಸ್ ನೋಡ್ತಾ ನಿಂತಿದ್ರು. ಅವರಿಗೆ ಏನು ಗೊತ್ತಾಗುತ್ತೆ ನನ್ನ ಕಷ್ಟ, ಅವರಿಗೇ ಆಗಲಿ ನೀನು ಸತ್ರೆ, ನಿನ್ನ ಕೈ ಕಾಲು ಮುರಿದ್ರೆ ಅಂತ ಎದುರಿಗೆ ಹೇಳ್ತಾ ಇದ್ರೆ ಮನಸ್ಸಿಗೆ ಎಷ್ಟು ಬೇಜಾರು ಆಗುತ್ತೆ ಅಂತ. ನನ್ನ ಉಗ್ರ ರೂಪವನ್ನು ಮೊದಲ ಬಾರಿ ನೋಡಿದ ನನ್ನ ಸ್ನೇಹಿತ ಯಾವಾಗ ಅಲ್ಲಿಂದ ಕಾಲು ಕಿತ್ತನೋ ಗೊತ್ತಾಗಲಿಲ್ಲ.

ತಿಗಣೆ ಮೀಮಾಂಸೆ



ತಾನಿರುವ ವ್ಯವಸ್ಥೆಗೆ ಹೊಂದಿಕೊಳ್ಳದ ಪ್ರಾಣಿ ಹೆಚ್ಚು ಕಾಲ ಆ ಪರಿಸರದಲ್ಲಿ ಬದುಕುವುದು ಕಷ್ಟ. ಕೆಲವರಿಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದೆಂದರೆ ಊಸರವಳ್ಳಿ ಬಣ್ಣ ಬದಲಿಸಿದಷ್ಟೆ ಸುಲಭ ಮತ್ತೆ ಕೆಲವರು ಡೈನೋಸಾರ್‌ಗಳಂತೆ ನಿರ್ಣಾಮವಾದರೂ ಆಗುತ್ತಾರೆ ಆದರೆ ಹೊಂದಾಣಿಕೆಗೆ ಮನಸ್ಸು ಮಾಡುವುದಿಲ್ಲ.
ಒಬ್ಬ ಮನುಷ್ಯ ತಾನು ಕೆಲಸ ಮಾಡುವ ಕಂಪೆನಿಯ ಆಡಳಿತದ ಪಾಲಿಸಿಗಳಿಗೆ ಒಳಪಟ್ಟಿರುತ್ತಾನೆ. ಉಳಿದವರಿಗೊಂದು ತನಗೇ ಒಂದು ಪಾಲಿಸಿ ಅನ್ನುವಂತೆ ವರ್ತಿಸಿದರೆ ಆಡಳಿತದ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಒಂದು ಮಗು ಹುಟ್ಟಿದ ಮೇಲೆ ತನ್ನ ಮನೆಯಲ್ಲಿಯೇ ವ್ಯವಸ್ಥೆಯ ಮೊದಲ ಪಾಠಗಳನ್ನು ಕಲಿಯುತ್ತಾ ಹೋಗುತ್ತದೆ. ಆಹಾರ ಸೇವನೆ, ಹಿರಿಯರೊಂದಿಗಿನ ವರ್ತನೆ, ಸಹ ವಯಸ್ಕರೊಂದಿಗಿನ ಒಡನಾಟ, ಶಿಸ್ತು-ಸಂಯಮ ಹೀಗೆ ಪ್ರತಿ ವರ್ತನೆಯಲ್ಲಿಯೂ ಕೂಡ ಮನೆಯಲ್ಲಿ ತಾನು ಕಲಿತ ಮೊದಲ ಪಾಠಗಳ ಮೂಲಕವೇ ಮಗು ಸಾಮಾಜಿಕ ವ್ಯವಸ್ಥೆಯಲ್ಲಿಯ ರೂಪುರೇಷೆಗಳನ್ನು ಮೈಗೂಡಿಸಿಕೊಳ್ಳುತ್ತಾ ಹೋಗುತ್ತದೆ.
ಹೊಂದಾಣಿಕೆ ಎಂದ ಕೂಡಲೇ ನನ್ನ ಪರಿಚಯಸ್ಥರ ಮನೆಯಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ. ಒಮ್ಮೆ ಅವರ ಮನೆಯಲ್ಲಿ ತಿಗಣೆಗಳು ಕಾಣಿಸಿಕೊಳ್ಳೋಕೆ ಶುರುವಾದವಂತೆ. ಮೊದಮೊದಲು ಅವುಗಳನ್ನು ನಿರ್ಲಕ್ಷಿಸಿದರೂ ರಕ್ತ ಬೀಜಾಸುರ ವಂಶಸ್ಠರಂತೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳೋಕೆ ಶುರುವಾದಾಗ ಗಾಬರಿಯಾಗಿ ಅವುಗಳ ನಿಯಂತ್ರಣಕ್ಕಾಗಿ ಮಾರ್ಗೋಪಾಯಗಳನ್ನು ಅವರಿವರ ಬಳಿ ಕೇಳಿದ್ದಾರೆ. ತಲೆಗೊಂದರಂತೆ ಅವರಿವರು ಕೊಟ್ಟ ಉಪಾಯಗಳನ್ನು ಜಾರಿಗೆ ತಂದರೂ ಅವುಗಳ ಸಂತತಿ ಬೆಳೆಯುತ್ತಲೇ ಹೋಯಿತಂತೆ.
ಮನೆಯಲ್ಲಿಯ ತಿಗಣೆಗಳ ಉಪಟಳ ಒಂದೆಡೆಯಾದರೆ ಹೊರಗಡೆಯ ವಿದ್ಯಾಮಾನಗಳು ಇನ್ನೂ ಅವರನ್ನು ಚಿಂತೆಗೀಡು ಮಾಡಿದವು. ಅವರ ಮನೆಯ ತಿಗಣೆಗಳ ವಿಚಾರ ತರಗೆಲೆಗಳಿಗೆ ಹಚ್ಚಿದ ಬೆಂಕಿಯ ಥರ ಒಬ್ಬರಿಂದ ಇನ್ನೊಬ್ಬರಿಗೆ ಹಬ್ಬಿ ಎಲ್ಲರೂ ಇವರ ಮನೆಯವರನ್ನು ಅಸ್ಪೃಶ್ಯರ ಥರ ನೋಡಲು ಶುರು ಮಾಡಿದರು. ಕೊನೆಗೆ ಪರಿಸ್ಥಿತಿಯ ಗಂಭೀರತೆ ಇವರಿಗೆ ಅರ್ಥವಾಗಿದ್ದು ಮನೆಗೆಲಸಕ್ಕೆ ಬರುತ್ತಿದ್ದ ಲಕುಮಿ "ನಿಮ್ಮನೆ ಸಾವಾಸ ಮಾತ್ರ ಬ್ಯಾಡಕ್ಕೋ" ಅಂತ ಉದ್ದಂಡ ನಮಸ್ಕಾರ ಹಾಕಿ ಹೇಳಿದಾಗ. ಅದೂ ಅಲ್ಲದೆ ಇತ್ತಿಚೆಗಷ್ಟೇ ಅವರ ಮನೆಗೆ ಹೆಣ್ಣು ಕೊಟ್ಟ ಬೀಗರೂ ಕೂಡ ಬಂದು "ನಿಮ್ಮ ಮನೆಯಲ್ಲಿ ನಮ್ಮ ಮಗಳಿಗೆ ಸರಿಯಾಗಿ ಊಟ ಹಾಕಿ ಚೆನ್ನಾಗಿ ನೋಡಿಕೊಳ್ತಾ ಇಲ್ಲ ಅನ್ಸುತ್ತೆ ನೋಡಿ ಎಷ್ಟೊಂದು ವೀಕಾಗಿದಾಳೆ" ಅಂತ ವಾಪಾಸು ಕರೆದುಕೊಂಡು ಹೋಗಿದ್ದರು. ಅವರ ಸೊಸೆ ಕೂಡ ತಿಗಣೆಗಳು ಮೈಯ ರಕ್ತ ಕುಡಿದು ಹೀಗೆ ಆಗಿರೋದು ಅಂತ ಹೇಳಿದ್ರೆ ಎಲ್ಲಿ ಅಪ್ಪ ಅಮ್ಮ ಕೂಡ ಮನೆಗೆ ಸೇರಿಸೊಲ್ವೊ ಅನ್ನೊ ಹೆದರಿಕೆಯಿಂದ ನಿಜವನ್ನು ಮುಚ್ಚಿಟ್ಟು ತಂದೆ ಮನೆ ಸೇರಿದ್ದಳು. ಪೆಸ್ಟ್ ಕಂಟ್ರೋಲ್ ಏಜೆನ್ಸಿಯಿಂದ ಜನರನ್ನು ಕರೆಸಿ ಅವರಿಗೆ ಸಾವಿರಾರು ರೂಪಾಯಿ ಸುರಿದಿದ್ದಾಯಿತು. ಮತ್ಯರೋ ಹೇಳಿದರು ಅಂತ ಮಂತ್ರವಾದಿ ಕರೆಸಿ ಮಂತ್ರದ ನೀರನ್ನು ತಿಗಣೆಗಳು ಇರುವ ಜಾಗಕ್ಕೆ ಸಿಂಪಡಣೆ ಮಾಡಿದ್ದಾಯಿತು ಯಾವುದಕ್ಕೂ ತಿಗಣೆಗಳು ಬಗ್ಗಲೇ ಇಲ್ಲವಂತೆ.
ಮನೆಯ ಗೋಡೆಗಳೋ ಪಿಕಾಸೋನ ಕಲಾಕೃತಿಗಳನ್ನೂ ಮೀರಿಸುವಂತೆ ತಿಗಣೆಗಳನ್ನು ಹೊಸಕಿದ ರಕ್ತದ ಕಲೆಗಳಿಂದ ತುಂಬಿ ಕಳೆಕೆಟ್ಟಿದ್ದವು. ಬೇರೆ ಯಾವುದೇ ಪ್ರಾಣಿಗಳಾಗಿದ್ದರೂ ಕೂಡ ಮನೆಯವರೆಲ್ಲ ಸೇರಿ ಬೇಟೆಯಾಡಿ ಮುಗಿಸಿಬಿಡುತ್ತಿದ್ದರೇನೋ ಆದರೆ ಮನೆಯಲ್ಲಿ ತುಂಬಿರುವುದು ಯಕಶ್ಚಿತ್ ತಿಗಣೆಗಳು. ಆದರೂ ಸಂದಿ ಗೊಂದಿಗಳಿಂದ ಅವುಗಳನ್ನು ಹೊರಗೆಳೆದು ಕೊಲ್ಲುವುದೂ ತಿಗಣೆಗಳು ಮತ್ತೆ ಬೆಳೆಯುವುದೂ ನಡೆದೇ ಇತ್ತು. ಮನೆಯಲ್ಲಿ ಇಂಟರ್ನೆಟ್ ಅರೆದು ಕುಡಿದಿರೋ ಹೈಕಳುಗಳೂ ಇದ್ದ ಬದ್ದ ಜಾಲತಾಣಗಳನ್ನೆಲ್ಲಾ ಹುಡುಕಿ ಪೆಟ್ರೋಲ್ ಅಥವಾ ಸೀಮೆ‌ಎಣ್ಣ್ ಸಿಂಪಡಿಸಿದರೆ ತಿಗಣೆಗಳು ಸಾಯುತ್ತವೆ ಅನ್ನೋ ವಿಷಯವನ್ನು ಕಂಡು ಹಿಡಿದು ಅದನ್ನು ಕಾರ್ಯರೂಪಕ್ಕೆ ತರಲಾಗಿ ಒಳ್ಳೆಯ ಫಲಿತಾಂಶವನ್ನೇ ಕೊಟ್ಟಿತು. ಇನ್ನೇನು ತಿಗಣೆಗಳು ನಾಮಾವಶೇಷ ಆಗುತ್ತವೆ ಮನೆ ಮಂದಿಯೆಲ್ಲಾ ನೆಮ್ಮದಿಯಿಂದ ಇರಬಹುದು ಅಂತಾ ನಿಟ್ಟುಸಿರು ಬಿಡುವಾಗಲೇ ತಿಗಣೆಗಳ ಹೊಂದಾಣಿಕೆ ಶಕ್ತಿ ಅವರಿಗೆ ಗೋಚರಿಸಿದ್ದು. ತಿಗಣೆಗಳು ಸೀಮೆ‌ಎಣ್ಣೆಗೂ ಸಾಯದೆ ಬದುಕುವಂತಹ ವಿಚಿತ್ರ ನಿರೋಧಕ ಗುಣವನ್ನು ಬೆಳೆಸಿಕೊಂಡಿದ್ದವು.
ಕೊನೆಗೆ ಆ ಮನೆ ಮಂದಿಯೆಲ್ಲಾ ಸಾಮಾನುಗಳನ್ನೆಲ್ಲಾ ಅದೇ ಮನೆಯಲ್ಲಿಯೇ ಬಿಟ್ಟು ಉಟ್ಟ ಬಟ್ಟೆಯಲ್ಲಿಯೇ ಬೇರೆ ಬಾಡಿಗೆ ಮನೆ ತಗೊಂಡು ಜೀವನ ಮಡುತ್ತಾ ಇದ್ದಾರೆ. ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗುವ ಗುಣವನ್ನು ತಿಗಣೆಗಳಿಂದಲೇ ಕಲಿಯಬೇಕೆಂಬುದು ನನ್ನ ಭಾವನೆ. ಇಷ್ಟೆಲ್ಲಾ ತಿಗಣೆಗಳ ಬಗೆಗಿನ ಪುರಾಣ ನಾನು ಯಾಕೆ ಬಿಚ್ಚಿಡಬೇಕಾಯ್ತು ಅಂದ್ರೆ ನಾನಿರುವ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಅಕಸ್ಮಾತ್ತಾಗಿ ತಿಗಣೆಯೊಂದನ್ನು ನೋಡಿದೆ. ಮುಂದಿನ ದಿನಗಳಲ್ಲಿ ನನಗೇನು ಗ್ರಹಚಾರ ಕಾದಿದೆಯೋ ನಾನು ನಂಬದ ಆ ದೇವರಿಗೇ ಗೊತ್ತು.