ಆ ಸುನಿಲನೆಂಬ ಹುಡುಗ ತನ್ನ ಪ್ರೇಯಸಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾ ಇದ್ದ. ಅವರ ಲವ್ ಶುರು ಆಗಿದ್ದೇ ಒಂದು ರೀತಿಯ ವಿಚಿತ್ರ ಸನ್ನಿವೇಶದಲ್ಲಿ. ಅವಳು, ಅವನ ಪಕ್ಕದ ಮನೆಯ ಹುಡುಗಿ, ಓದಿನಲ್ಲಿ ತುಂಬಾ ಚುರುಕಾಗಿದ್ದವಳು. ಅವಳ ಮನೆಯಲ್ಲೋ ಕಿತ್ತು ತಿನ್ನುವ ಬಡತನ, ಇವಳು ಬಿ.ಎಸ್ಸಿಯ ನಂತರ ಎಂ.ಎಸ್ಸಿ ಮಾಡಬೇಕು ಅಂತ ಆಕಾಂಕ್ಷೆ ಇಟ್ಟುಕೊಂಡು ಹಾಗಲು ರಾತ್ರಿ ಕಷ್ಟ ಪಟ್ಟು ಓದುತ್ತಿದ್ದಳು. ಅವಳ ಓದಿಗೆ ಪ್ರತಿಫಲವಾಗಿ ಮೊದಲ ದರ್ಜೆಯಲ್ಲೇ ಪಾಸಾಗಿ ಯೂನಿವರ್ಸಿಟಿಯಲ್ಲಿ ಫ್ರೀ ಸೀಟು ಕೂಡ ಸಿಕ್ಕಿತ್ತು.
ಎಲ್ಲಾ ಖರ್ಚು ಸೇರಿ ಎರಡು ವರ್ಷದ ಎಂ.ಎಸ್ಸಿ’ಗೆ ಹಾಸ್ಟೆಲ್ ಫೀಜು ಸೇರಿ ಸುಮಾರು ಎಪ್ಪತ್ತರಿಂದ ಎಂಭತ್ತು ಸಾವಿರ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಿ ಮನೆಯಲ್ಲಿ ಕೇಳಲಾಗಿ ಅವಳ ಅಪ್ಪ "ನನ್ನ ಹತ್ತಿರ ಅಷ್ಟೊಂದು ದುಡ್ಡು ಇಲ್ಲ ಮಗಳೇ ಬೇಕಾದ್ರೆ ಎಜುಕೇಷನ್ ಲೋನ್ ತಗೋ ನಿನ್ನ ಓದು ಮುಗಿದ ಮೇಲೆ ಕೆಲಸ ಹುಡುಕಿಕೊಂಡು ನಿನ್ನ ಲೋನ್ ನೀನು ತೀರಿಸಿಕೊ ಇಲ್ಲ ಅಂದ್ರೆ ಎಂ.ಎಸ್ಸಿ ಆಸೆ ಬಿಡು" ಅಂತ ಹೇಳಿದ್ದು ಕೇಳಿ ಇವಳಿಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಭಾಸವಾಗಿತ್ತು. ಇವನೆಂತಾ ಅಪ್ಪ ನಾನು ಚಿಕ್ಕವಳಾಗಿದ್ದಾಗಿನಿಂದಲೂ ನನಗೇನು ಕೊಡಿಸಿಲ್ಲ, ಒಮ್ಮೆಯಾದ್ರು ಕಾಟಚಾರಕ್ಕೂ ಕೂಡ ನಿನಗೇನು ಬೇಕಮ್ಮ ಮಗಳೇ ಅಂತ ಕೇಳಿಲ್ಲ. ಬರೀ ಮಗಾ ಮಗಾ ಅಂತ ಇದ್ದ ಒಂದು ಮನೆಯನ್ನೂ ಮಾರಿ ಅವನ ಇಷ್ಟದಂತೆಯೇ ಎಂ.ಬಿ.ಬಿ.ಎಸ್ ಓದಿಸಿದ. ಹೋಗಲಿ ಅಣ್ಣನಾದವನಾದ್ರು ತಂಗಿಯಾದ ನನಗೆ ಓದಲು ಸಹಾಯ ಮಾಡ್ತಾನೆ ಅಂದ್ರೆ ಅವನು ಓದೋದು ಮುಗಿದದ್ದೇ ತಡ ಮನೆಯಲ್ಲಿ ತಂಗಿ ಇದಾಳೆ ಅನ್ನೋದನ್ನೂ ಮರೆತು ತನ್ನ ಸಹಪಾಠಿಯೊಬ್ಬಳನ್ನು ಮದುವೆಯಾಗಿದ್ದ.
ಅಣ್ಣನ ಹೆಂಡತಿ ನಗರದ ಪ್ರಮುಖ ಡಾಕ್ಟರರೊಬ್ಬರ ಮಗಳು, ಅವಳು ತನ್ನ ಪ್ರೀತಿಯ ಬಗ್ಗೆ ತಂದೆಗೆ ಹೇಳಲಾಗಿ ಅವರು ಇವನನ್ನು ಕರೆಸಿ "ನೋಡಪ್ಪಾ ನೀನು ನನ್ನ ಮಗಳು ಇಬ್ಬರೂ ಡಾಕ್ಟರ್ಸ್ ಆಗಿರೋದ್ರಿಂದ ನನಗೆ ನಿಮ್ಮ ಮದುವೆ ಮಾಡೋಕೆ ಯಾವುದೇ ಅಭ್ಯಂತರ ಇಲ್ಲ ಆದ್ರೆ ಒಂದು ಕಂಡೀಷನ್ನಿದೆ ನೀನು ನನ್ನ ಒಬ್ಬಳೇ ಮಗಳನ್ನು ಮದುವೆ ಆಗಬೇಕು ಅಂದ್ರೆ, ನಾನು ಕಷ್ಟಪಟ್ಟು ಕಟ್ಟಿ ಬೆಳೆಸಿರೋ ನನ್ನ ಆಸ್ಪತ್ರೆಗೆ ನನ್ನ ನಂತರ ನೀನೇ ವಾರಸುದಾರ ಆಗಬೇಕು ಅನ್ನೋ ಆಸೆ ನಿನಗಿದ್ರೆ ನಿನ್ನ ಅಪ್ಪ, ಅಮ್ಮ, ತಂಗಿ ಎಲ್ಲರನ್ನೂ ಮರೆತು ನನ್ನ ಮನೆಯಳಿಯ ಆಗಿ ಇರಬೇಕು" ಅಂತ ಹೇಳಿದ್ರಂತೆ. ಮೊದಲಿಂದಲೂ ಸ್ವಭಾವತಃ ಸ್ವಾರ್ಥಿಯಾಗಿದ್ದ ಅಣ್ಣನೋ ದಿನಾ ಸಾಯೋರಿಗೇ ಅಳೋರ್ಯಾರು ಅಂದುಕೊಂಡು ಅಪ್ಪ, ಅಮ್ಮ, ತಂಗಿ ಜೀವಂತವಾಗಿದ್ದಾರೆ ಅವರಿಗೆ ನೆಪಕ್ಕಾದ್ರು ಒಂದು ಮಾತು ಹೇಳಬೇಕು ಅನ್ನುವುದನ್ನು ಮರೆತು ಮದುವೆಯಾಗಿದ್ದ.
ತನ್ನ ಅಣ್ಣ ಮದುವೆಯಾಗಿರೋದು ಅಪ್ಪನಿಗೆ ಯಾರೋ ಹೇಳಿ, ಯಾಕಪ್ಪಾ ಮಗನೇ ಹೀಗೆ ಮಾಡಿದಿ ಅಂತ ಕೇಳಬೇಕು ಅಂತ ಅವನ ಬಳಿ ಹೋದರೆ, "ನೀನು ಇಷ್ಟು ದಿನ ಕೊಟ್ಟ ಕಷ್ಟನೇ ಸಾಕು, ಎಷ್ಟು ದಿನಾ ಅಂತ ನಿನ್ನ ಗೋಳು ನೋಡ್ತಾ ಇರೋಕಾಗುತ್ತೆ. ನಾನು ಈಗ ತಾನೆ ಲೈಫಿನಲ್ಲಿ ಸೆಟ್ಲು ಆಗ್ತಾ ಇದೀನಿ, ನನಗೂ ಮದುವೆಯಾಗಿದೆ ನನ್ನ ಹೆಂಡತಿ ಬೇರೆ ಈಗಾಗ್ಲೇ ಗರ್ಭಿಣಿ, ನನ್ನ ಮಾವ ನಿನ್ನ ಜೊತೆ ಮಾತಾಡ್ತಾ ಇರೋದು ಗೊತ್ತಾದ್ರೆ ಬೇಜಾರಾಗ್ತಾರೆ ಸುಮ್ನೆ ತೊಂದರೆ ಕೊಡಬೇಡ ಹೋಗು" ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದನಂತೆ. ಇನ್ನು ಅಪ್ಪನೋ ಬಾಯಿ ಸತ್ತ ಪ್ರಾಣಿ ಅಂತನೇ ಊರಲ್ಲೆಲ್ಲಾ ಫೇಮಸ್ಸು. ಇದುವರೆಗೂ ಒಬ್ಬರಿಗೂ ದನಿ ಎತ್ತರಿಸಿ ಮಾತಾಡಿಲ್ಲ, ಅಮ್ಮ ಎಷ್ಟೇ ಕೂಗಾಡಿದ್ರು ಏನೇ ಕೇಳಿಸಿಯೇ ಇಲ್ಲ ಅನ್ನುವಂತೆ ತೆಪ್ಪಗೆ ಒಂದು ಕಡೆ ಕೂತಿರ್ತಾನೆ. ಮಗ ಅಷ್ಟೆಲ್ಲಾ ಮಾತಾಡಿದ್ರು ಕೂಡ ತಿರುಗಿ ಒಂದೂ ಹೇಳದೆ ಹಾಗೆ ಬಂದಿದ್ದಾನೆ. ಅಮ್ಮ ಹೇಗೆ ಏಗ್ತಿದಾಳೋ ಅಪ್ಪನ ಹತ್ರ. ಯಾವಾಗ್ಲೂ ತನ್ನೊಳಗೆ ಇರೋ ಅಸಹನೆಯನ್ನು ಮೂರೊತ್ತು ಎಲ್ಲರ ಹತ್ರ ಜಗಳ ಮಾಡ್ತಾ ಹೊರಗೆ ಹಾಕ್ತಾ ಇರ್ತಾಳೆ. ಈವಮ್ಮ ಜಗಳಗಂಟಿ ಅದಕ್ಕೆ ಆವಯ್ಯ ಯಾವಾಗ್ಲೂ ಸೈಲೆಂಟ್ ಆಗಿರ್ತಾನೆ ಅಂತ ಅವರಿವರು ಮಾತಾಡ್ತಾ ಇರ್ತಾರೆ. ಇಂತಹವರ ಹೊಟ್ಟೆಯಲ್ಲಿ ಹುಟ್ಟೋಕೆ ನಾನು ಹೋದ ಜನ್ಮದಲ್ಲಿ ಯಾವ ಪಾಪ ಮಾಡಿದ್ದೆನೋ, ಈಗ ನೋಡಿದ್ರೆ ನನ್ನ ಎಂ.ಎಸ್ಸಿ ಓದಿಸೋಕೆ ದುಡ್ಡಿಲ್ಲ ಅಂತಿದಾನೆ ಎಂದು ಇದೆಲ್ಲವನ್ನೂ ಒಂದೇ ಉಸಿರಿನಲ್ಲಿ ನೆನಪಿಸಿಕೊಂಡಿದ್ದಳು.
ಇವರನ್ನೆಲ್ಲಾ ನಂಬಿಕೊಂಡ್ರೆ ನಾನು ನನ್ನ ಜೀವನ ರೂಪಿಸಿಕೊಳ್ಳೋಕೆ ಆಗಲ್ಲಾ ಇಂತಹ ಅಪ್ಪ ಮಗಳಾದ ನನ್ನ ಮದುವೆಯನ್ನೂ ಒಳ್ಳೆಯ ರೀತಿ ಮಾಡಿ ಕೊಡ್ತಾನೆ ಅನ್ನೋ ನಂಬಿಕೆಯಂತು ಉಳಿದಿಲ್ಲ ಎಂದು ಮನಸಿನಲ್ಲೇ ಲೆಕ್ಕಾಚಾರ ಹಾಕಿ ಎಂ.ಎಸ್ಸಿ ಖರ್ಚಿಗೆ ಲೋನ್ ತಗೊಳೋಕೆ ಅಂತ ಅಪ್ಪನನ್ನೂ ಕರ್ಕೊಂಡು ಬ್ಯಾಂಕಿಗೆ ಹೋಗಿದ್ದಳು. ಅಲ್ಲಿ ಬ್ಯಾಂಕಿನ ಮ್ಯಾನೇಜರು "ಸರಿಯಮ್ಮಾ ಲೋನು ಕೊಡ್ತೀವಿ ಆದರೆ ಸೆಕ್ಯೂರಿಟಿಗೆ ಅಂತ ಏನಾದ್ರು ಬೇಕಮ್ಮಾ ಇಲ್ಲ ಅಂದ್ರೆ ಕೊಡೋಕಾಗಲ್ಲ" ಅಂತ ಹೇಳಿ ಕಳುಹಿಸಿದ್ದರು. ಇವಳಿಗೆ ಇದ್ದ ಎಲ್ಲಾ ಅವಕಾಶಗಳೂ ಕೈ ತಪ್ಪಿ ಹೋದ ಅನುಭವವಾಗಿತ್ತು. ಬಟ್ಟೆಯಂಗಡಿಯಲ್ಲಿ ರೈಟರ್ ಆಗಿ ಕೆಲಸ ಮಾಡ್ತಾ ಇರೋ ಅಪ್ಪ ಈಗಾಗಲೇ ಮಗನ ಓದಿಗೆ ಮನೆಯನ್ನೂ ಮಾರಿ ಊರಲ್ಲೆಲ್ಲಾ ಸಾಲ ಮಾಡಿಕೊಂಡಿದಾನೆ. "ಅಪ್ಪ ನೀನು ಬರೀ ಮಗನಿಗೇ ಇಷ್ಟೊಂದು ಇಂಪಾರ್ಟೆನ್ಸ್ ಕೊಡೋದು ಸರಿ ಅಲ್ಲ ಇನ್ನೂ ಓದೋದು ಮುಗಿದಿಲ್ಲಾ ಅವನದು ಆದರೂ ನಿನ್ನ ಒಂಚೂರೂ ಲೆಕ್ಕಕ್ಕೆ ತಗೊಳ್ದೆ ಮಾತಾಡ್ತಾನೆ, ಮುಂದೆ ನಾನು ಬೀದಿಗೆ ಬೀಳ್ಬೇಕಾಗುತ್ತೆ" ಅಂತ ಅಂದಿದ್ದಕ್ಕೆ "ಇಲ್ಲ ಮಗಳೇ ನಿನ್ನ ಅಣ್ಣ ಅಲ್ವಾ ಹಾಗೆಲ್ಲಾ ಮಾತಾಡಬಾರದು ಅವನು ಡಾಕ್ಟರ್ ಆದ ಮೇಲೆ ಮನೆ ಜವಾಬ್ದಾರಿನ ಅವನೇ ವಹಿಸಿಕೊಳ್ತಾನೆ ಅವನು ಓದೋದು ಮುಗಿಯುವವರೆಗೂ ನಾವೆಲ್ಲಾ ಸ್ವಲ್ಪ ಕಷ್ಟಪಡಲೇಬೇಕು ಅಂತ ನನಗೇ ಬುದ್ಧಿವಾದ ಹೇಳಿದ್ದ" ಆದರೆ ಮುಂದೆ ನಡೆದಿದ್ದೆಲ್ಲಾ ನಾನು ಹೇಳಿದ ಹಾಗೆ ತಾನೇ ಆಗಿದ್ದು. ಬಾಯಲ್ಲಿ ಮಚ್ಚೆ ಇರೋ ನಾನು ಹೇಳೋದು ಎಂದಿಗೂ ಸುಳ್ಳು ಆಗಲ್ಲ ಅವತ್ತು ನಾನಂದುಕೊಂಡ ಹಾಗೇನೆ ನಾಮರ್ದನ ಹಾಗೆ ಮನೆಯ ಜವಾಬ್ದಾರಿ ಹೊರದೇ ಶ್ರೀಮಂತ ಮಾವನ ಮನೆಯ ನಾಯಿಯಾಗಿದ್ದಾನೆ. ಇಂತಹ ಮನೆಯಲ್ಲಿ ಹುಟ್ಟಿದ ನನ್ನ ಹಣೆಬರಹಕ್ಕೆ ಏನು ತಾನೆ ಮಾಡೋಕಾಗುತ್ತೆ, ಒಂದು ವರ್ಷ ಕೆಲಸ ಮಾಡಿಯಾದರೂ ಸರಿ ಹಣ ಕೂಡಿಸಿ ಎಂ.ಎಸ್ಸಿ ಓದಲೇಬೇಕು ಎಂದು ದೃಢ ನಿಶ್ಚಯಿಸಿ ಮನೆಯಿಂದ ಸ್ವಲ್ಪ ದೂರ ಇದ್ದ ಪ್ರೈಮರಿ ಸ್ಕೂಲಿಗೆ ಶಿಕ್ಷಕಿಯಾಗಿ ಸೇರಿದ್ದಳು.
ಕೆಲಸಕ್ಕೆ ಸೇರಿ ನಾಲ್ಕೈದು ತಿಂಗಳಾಗಿತ್ತಷ್ಟೇ ಸಂಜೆ ಏಳರ ಸುಮಾರಿಗೆ ಅಪ್ಪ ಇನ್ನೂ ಮನೆಗೆ ಬಂದಿರಲಿಲ್ಲ. ಆಗ ಒಬ್ಬ ಬುಡುಬುಡುಕೆಯವನು ಮನೆಯ ಬಾಗಿಲಲ್ಲಿ ನಿಂತುಕೊಂಡು "ನುಡಿದೈತೆ ನುಡಿದೈತೆ ಹಾಲಕ್ಕಿ ಶಕುನ ನುಡಿದೈತೆ, ನಿಮ್ಮ ಕಷ್ಟಕ್ಕ ಪರಿಹಾರ ಹೇಳಾಕ ಕಳಿಸೈತೆ, ನಾ ಹೇಳಿದ್ದು ನಿರ್ಲಕ್ಸ ಮಾಡಿದರ ಮನೆ ಯಜಮಾನನ ಸಾವಾಗುತೈತೆ" ಅಂತ ಇಡೀ ಓಣಿಗೇ ಕೇಳುವಂತೆ ಕೂಗಿದ್ದ. ನಾನೇನೋ ಮನೆ ಯಜಮಾನ ಅಂದ್ರೆ ನಾವಿರುವ ಬಾಡಿಗೆ ಮನೆಯ ಮಾಲೀಕನ ಬಗ್ಗೆ ಇವನು ಬಡಬಡಿಸ್ತಾ ಇರೋದು ಅಂತಾ ಸುಮ್ಮನೇ ಇದ್ದೆ ಆದ್ರೆ ಅಮ್ಮ ಕೇಳ್ಬೇಕಲ್ಲ "ಅಯ್ಯೋ ನನ್ನ ಗಂಡನಿಗೆ ಏನಾದ್ರು ಆದ್ರೆ ನನ್ನ ಗತಿ ಏನು, ನೀವೇಳೋದಕ್ಕೆ ಅರ್ಥ ಏನು ಸ್ವಾಮಿ ಅದಕ್ಕೆ ಪರಿಹಾರ ಏನು ಮಾಡಿಸಬೇಕು" ಅಂತ ಬುಡುಬುಡುಕೆಯವನನ್ನು ಮನೆಯ ಒಳಗೆ ಬರಮಾಡಿಕೊಂಡು ಕೇಳಲಾಗಿ. ಆ ಬುಡುಬುಡುಕೆಯವನು "ನೀವು ಅನುಭವಿಸ್ತಾ ಇರೋ ತೊಂದ್ರೆ ಅಂತಿಂತದ್ದಲ್ಲಮ್ಮಾ ರಕುತ ಪಿಶಾಚಿಗಳ ಕಣ್ಣು ನಿಮ್ಮ ಮನೆ ಮೇಲೆ ಬಿದ್ದೈತೆ, ಇಗಾಗ್ಲೆ ಸಮಸ್ಸೆ ಸುರುವಾಗಿ ಭೋ ಟೇಮ್ ಆಗೈತೆ, ತಡ ಮಾಡಿದರೆ ದೊಡ್ಡ ಅನಾವುತ ಆಗ್ತೈತೆ, ನಾನೇಳಿದಂಗೆ ಒಂದು ಸಾಂತಿ ಮಾಡ್ಸಿ, ಪೂಜೆ ಮಾಡ್ಸಿ" ಅಂದ. ನನ್ನ ಅಮ್ಮನಿಗೋ ಇಂತದ್ದರಲ್ಲೆಲ್ಲಾ ಭಯ ಭಕ್ತಿ ಜಾಸ್ತಿ, ಆಯ್ತು ಸ್ವಾಮೋರ ಅದೇನು ಪೂಜೆ ಮಾಡೋದು ಏಳಿ ಮಾಡಿಸ್ತೀನಿ ಅಂದದ್ದಕ್ಕೆ ಅವನು ಪೂಜೆಗೆ ಬೇಕಾದ ಸಾಮಾನುಗಳ ಒಂದು ಲಿಸ್ಟೇ ಕೊಟ್ಟು "ಈ ಸ್ವಾಮಾನೆಲ್ಲ ಜೋಡಿಸಿ ಇಟ್ಕಳಿ ನಾಳೆ ಇದೇ ಟೇಮಿಗೆ ಬರ್ತೀನಿ ಪೂಜೆ ಮಾಡೋದೆಲ್ಲ ಮಸಾಣದಾಗೆ ನಿಮ್ಗೆ ಬರಾಕ ಹೆದರ್ಕೆ ಆದ್ರೆ ನಿಮ್ಮ ಪರುವಾಗಿ ನಾನೆ ಈಗಿ ಪೂಜೆ ಮಾಡ್ಕತೀನಿ, ಇವತ್ತು ನಾನು ಬಂದಿದ್ದು ನೀನಾಗ್ಲಿ ನಿನ್ನ ಮಗಳಾಗ್ಲಿ ಯಜಮಾನಂಗೆ ಏಳ್ಬಾರ್ದು ಏಳಿದ್ರೆ ರಕ್ತ ಕಾರಿ ಸಾಯ್ತಾನೆ, ನೆಪ್ಪಿರ್ಲಿ ನಾಳೆ ಇದೇ ಟೇಮಿಗೆ ಬಂದು ಪೂಜೆ ಸಾಮಾನು ತಗೊಂಡಿಯ್ತೀನಿ, ಪೂಜೆ ಖರ್ಚು ಅಂತ ಒಂದಿಪ್ಪತ್ಸಾವ್ರ ಆಯ್ತದೆ, ತೆಗೆದಿಟ್ಕಳಿ" ಅಂದು ಅಲ್ಲಿಂದ ಹೊರಟು ಹೋದ. ಅವನು ಹೇಳಿದ ರೀತಿಗೆ ನಾನು ಕೂಡ ಹೆದರಿದ್ದೆ ನನ್ನ ಅಪ್ಪನೂ ಸತ್ತು ಹೋದ್ರೆ ಮುಂದಿನ ಗತಿ ಏನು ಎಂ.ಎಸ್ಸಿ ಬೇಕಾದ್ರೆ ಇನ್ನು ಎರಡು ವರ್ಷ ಬೇಕಾದ್ರು ಮಾಡಬಹುದು ಅಂತ ಅಂದುಕೊಂಡು ಅಲ್ಲಿವರೆಗೆ ಕೆಲಸ ಮಾಡಿ ಕೂಡಿಟ್ಟಿದ್ದ ದುಡ್ಡನ್ನು ಅಮ್ಮನ ಕೈಗೆ ಕೊಟ್ಟೆ.
ಅಪ್ಪ ಕೆಲಸ ಮುಗಿಸಿ ಬರೋದೆ ದಿನಾಲು ರಾತ್ರಿ ಒಂಭತ್ತಾಗುತಿತ್ತು. ಅಷ್ಟರೋಳಗೇ ಅವನಿಗೆ ಬೇಕಾದ ಪೂಜೆ ಸಾಮಗ್ರಿ,ದುಡ್ಡನ್ನು ಕೊಟ್ಟು ಕಳಿಸೋದು ಅಂತ ಅಮ್ಮ ನಾನು ಮಾತಾಡಿಕೊಂಡಿದ್ವಿ. ಹೇಳಿದ ಹಾಗೆ ಬುಡುಬುಡುಕೆಯವನು ಸಂಜೆ ಆರೂವರೆಗೇ ಬಂದಿದ್ದ. ಪೂಜೆ ಸಾಮಾನು ಇಪ್ಪತ್ತು ಸಾವಿರ ದುಡ್ಡೂ ಅವನ ಕೈಗೆ ಕೊಟ್ಟ ಮೇಲೆ "ನೋಡಮ್ಮ ತಾಯಿ ನಿನ್ನ ಗಂಡ ಹಳೇ ಜನ್ಮದ ಪಾಪ ಇರೋದಕ್ಕೇ ನಿನ್ನ ಮಾಂಗಲ್ಯದ ಪವರ್ರು ಕಡಿಮೆ ಆಗೈತೆ, ಮಾಂಗಲ್ಯ ಪೂಜೆನ ಮಸಾಣದಾಗೆ ಆಗ ತಾನೆ ಹೂತ ಹೆಣ ತೆಗೆದು ಮಾಡ್ಬೇಕು" ಅಂತ ಹೇಳಿದ. ಅದಕ್ಕೆ ಅಮ್ಮ "ಸಾಮಿ ನಾವು ಹೆಣ್ಮಕ್ಳು ನಾವು ಹೆಂಗೆ ಸುಡುಗಾಡಿಗೆ ಬಂದು ಪೂಜೆ ಮಾಡೋದು" ಅಂದಿದ್ದಕ್ಕೆ "ನೋಡು ತಾಯಿ ನಿನಗೆ ಮಸಾಣಕ್ಕೆ ಬರಾಕಾಗಕಿಲ್ಲ ಅಂದ್ರೆ ಪರುವಾಗಿಲ್ಲ ಇವತ್ತು ರಾತ್ರಿ ಮಟ್ಟಿಗೆ ನನ್ನ ಕೈಗೆ ತಾಳಿ ಕೊಟ್ಟಿರು ರಾತ್ರಿ ಪೂಜೆ ಮಾಡಿ ಬೆಳಿಗ್ಗೆ ವಾಪಸ್ಸು ಕೊಡ್ತೀನಿ" ಅಂದ. ಅದಕ್ಕೆ ನಾನು ಅನುಮಾನದಿಂದ ಅಮ್ಮನ್ನ ತಡೆಯಲಾಗಿ ಅವನು "ನಿನ್ನ ಮನೆ ಕಷ್ಟ ಪರಿಹಾರ ಮಾಡಾಕಂತ ಬಂದ್ರೆ ನನ್ನೆ ಅನುಮಾನದಿಂದ ನೋಡ್ತೀರ, ನನಗೆ ಕೋಪ ಬಂದ್ರೆ ನಿಮ್ಮ ಕುಟುಂಬ ಸರ್ವನಾಸಾಗುವಂಗೆ ಸಾಪ ಕೊಡ್ತೀನಿ" ಅಂತ ಸಿಟ್ಟಿನಿಂದ ಕೂಗಾಡಿದ. ಅಮ್ಮ ಹೆದರಿ ಹತ್ತು ತೊಲೆಯ ತಾಳಿ ತೆಗೆದು ಕೊಟ್ಟು ಹರಿಸಿನ ದಾರ ಕಟ್ಟಿಕೊಂಡು "ಸಾಮಿ ಗಂಡನಿಗೆ ಗೊತ್ತಾದ್ರೆ ಸುಮ್ನೆ ಪ್ರಾಬ್ಲಮ್ಮಾಕ್ಕಾತಿ ಒಂದು ದಿವ್ಸ ಎಂಗೋ ನೋಡ್ಕಂತೀನಿ ಮರೀದೆ ನಾಳೆ ಪೂಜೆ ಮಾಡಿ ತಂದು ಕೊಟ್ಬಿಡಿ ಸಾಮಿ ಎಂಗೋ ಗಂಡ ಉಳ್ಕಂಡ್ರೆ ಸಾಕು" ಅಂದಳು. ಬುಡುಬುಡುಕೆಯವನು ಬಂಗಾರದ ತಾಳಿ, ದುಡ್ಡು ಸಿಕ್ಕಿದ್ದಕ್ಕೆ ಪ್ರಸನ್ನನಾಗಿ "ಹೆದರಬೇಡ ತಾಯಿ ಎಲ್ಲಾ ಒಳ್ಳೇದಕಾತಿ" ಅಂತ ಜಾಗ ಖಾಲಿ ಮಾಡಿದ.
ಮೂರು ನಾಲ್ಕು ದಿನ ಆದ್ರೂ ಬುಡುಬುಡುಕೆಯವನು ವಾಪಸ್ಸು ಬರದಿದ್ದನ್ನು ಕಂಡು ಮೋಸ ಹೋಗಿರೋದಂತು ಪಕ್ಕಾ ಆಗಿತ್ತು. ತಾಳಿ ಎಲ್ಲಿ ಕಾಣ್ತಾ ಇಲ್ಲ ಅಂತ ಅಪ್ಪ ಕೇಳಿದ್ದಕ್ಕೆ ಅಮ್ಮ ಆಗಿದ್ದೆಲ್ಲಾ ಹೇಳಿ ನಿನ್ನ ಜೀವ ಉಳಿಸೋಕೆ ಹೋಗಿ ಎಲ್ಲಾ ಕಳ್ಕೊಂಡೆ ಅಂತ ಅಪ್ಪನ ಮೇಲೇ ಗೂಬೆ ಕೂರಿಸಿದಳು. ಅಪ್ಪ ಯಥಾ ರೀತಿ ಮುಂದೆ ಮಾತಾಡೋಕೆ ಹೋಗ್ಲಿಲ್ಲ. ಎಂ.ಎಸ್ಸಿಗೆ ಅಂತ ಕೂಡಿಟ್ಟ ದುಡ್ಡು ಕೂಡ ಹೋಯ್ತು ಪ್ರೈಮರಿ ಸ್ಕೂಲಿಗೆ ಪಾಠ ಹೇಳ್ತಾ ಇದ್ದಿದ್ರಿಂದ ಬರ್ತಾ ಇದ್ದಿದ್ದೆ ತಿಂಗಳಿಗೆ ಮೂರೂವರೆ ಸಾವಿರ ರೂಪಾಯಿ. ಇನ್ನು ಏಳು ತಿಂಗಳು ಕೆಲಸ ಮಾಡಿದ್ರು ಕೂಡ ಎಂ.ಎಸ್ಸಿಗೆ ಬೇಕಾದಷ್ಟು ಕೂಡಿಡೋಕೆ ಆಗಲ್ಲ ಅಂತ ಅವಳಿಗೂ ಗೊತ್ತಾಗಿ ಹೋಗಿತ್ತು ಆದರೂ ಯಾಂತ್ರಿಕವಾಗಿ ಕೆಲಸಕ್ಕೆ ಹೋಗಿ ಬರುತ್ತಿದ್ದಳು.
ಇಂತಹ ಸಮಯದಲ್ಲೇ ಅವಳಿಗೆ ಸುನಿಲನ ಪರಿಚಯ ಆಗಿದ್ದು. ಮೊದಮೊದಲು ದಾರಿಯಲ್ಲಿ ಆಗೀಗ ಸಿಕ್ಕಾಗ ಇಬ್ಬರ ನಡುವೆ ಮುಗುಳ್ನಗೆ ಮಿನಿಮಯ ಆಗ್ತಾ ಇತ್ತು. ಆಮೇಲೆ ಅವನು ಹೋಗುತಿದ್ದ ಕಾಲೇಜು ತನ್ನ ಸ್ಕೂಲಿನ ಹಾದಿಯಲ್ಲೇ ಇದ್ದಿದ್ದರಿಂದ ಅವರಿಬ್ಬರ ಮುಗುಳ್ನಗೆಯಿಂದ ಪರಿಚಯ, ಪರಿಚಯದಿಂದ ಪ್ರೀತಿಯಾಗಿ ಬದಲಾಗಿತ್ತು. ಅವಳು ತನ್ನ ಬಗ್ಗೆ ಎಲ್ಲವನ್ನೂ ಅವನೊಂದಿಗೆ ಹೇಳಿಕೊಂಡಿದ್ದಳು. ಅವನೂ ಕೂಡ ತಾನು ಡಿಪ್ಲೋಮ ಮುಗಿಸಿ ಎಂಜಿನಿಯರಿಂಗ್ ಮಾಡ್ತಾ ಇರೋದರ ಬಗ್ಗೆ ಹೇಳಿದ್ದ ಮತ್ತು ಅವಳಿಗೆ ತಾನು ಡಿಪ್ಲೋಮದ ಮೇಲೆಯೇ ಕೆಲಸ ಹುಡುಕಿಕೊಂಡು ಅವಳ ಆಸೆಯಾದ ಎಂ.ಎಸ್ಸಿ ಖರ್ಚನ್ನೆಲ್ಲಾ ಭರಿಸುವುದಾಗಿಯೂ, ಎಂ.ಎಸ್ಸಿ ಮುಗಿದ ಮೇಲೆ ಇಬ್ಬರು ಮದುವೆಯಾಗೊಣ ಎಂದು ಹೇಳಿದ್ದ. ಅಂತೆಯೇ ಎಂಜಿನಿಯರಿಂಗ್ ಅರ್ಧಕ್ಕೆ ನಿಲ್ಲಿಸಿ ದೂರದ ಗೋವಾದಲ್ಲಿ ಕೆಲಸ ಹಿಡಿದು ಅವಳ ಫೀಜಿಗೆ ಬೇಕಾದ ದುಡ್ಡನ್ನು ಉಳಿಸಿ ಕಳುಹಿಸಿಕೊಟ್ಟಿದ್ದ.
ಅವಳೂ ಕೂಡ ತನ್ನ ಬಹುದಿನದ ಕನಸು ಸುನಿಲನಿಂದ ನನಸಾಗಿದ್ದಕ್ಕಾಗಿ ಅವನಿಗೆ ತನ್ನ ತನು ಮನವನ್ನೆಲ್ಲಾ ಧಾರೆ ಎರೆದಿದ್ದಳು. ಹಿಂದೆಂದಿಗಿಂತಲೂ ಹೆಚ್ಚಿನ ಸಂತೋಷದಿಂದ ತಾನಿರುವುದು ಅವಳಿಗೆ ಗಮನಕ್ಕೆ ಬಂದಿತ್ತು ಕೂಡ. ತುಂಬಾ ಕೃಶಳಾಗಿದ್ದ ಅವಳು ದಪ್ಪವಾಗಲೆಂದು ಏನೇನೋ ಔಷಧಿಗಳನ್ನೆಲ್ಲಾ ಕೊಡಿಸಿದ್ದ ಮತ್ತು ಹೆಸರುಕಾಳನ್ನು ದಿನಾಲು ಮೊಳಕೆ ಹೊಡಿಸಿ ತಿನ್ನುವಂತೆಯೂ ತಾಕೀತು ಮಾಡಿದ್ದ. ಹೀಗೇ ಇದ್ದವಳಿಗೆ ಅದೇ ಯೂನಿವರ್ಸಿಟಿಯ ಹೊಸ ಪ್ರೊಫೆಸರ್ ಒಬ್ಬ ಗಂಟು ಬಿದ್ದಿದ್ದ ಸಾಲದ್ದಕ್ಕೆ ಅವಳ ಮನೆಗೆ ಹೋಗಿ ನಿಮ್ಮ ಮಗಳನ್ನು ತನಗೆ ಮದುವೆ ಮಾಡಿ ಕೊಟ್ಟರೆ ತಬ್ಬಲಿಯಾದ ತಾನು ಆರ್ಥಿಕವಾಗಿ ಏನೇ ಸಹಾಯ ಬೇಕಾದರೂ ಮಾಡುವುದಾಗಿ ಅವಳ ಅಪ್ಪ, ಅಮ್ಮನ ತಲೆ ಕೆಡಿಸಿದ್ದ. ಇದು ಗೊತ್ತಾದಾಗ ಸುನಿಲ ಆ ಪ್ರೊಫೆಸರ್‌ಗೆ ಧಮಕಿ ಹಾಕಿ ತನ್ನ ಹುಡುಗಿಯ ತಂಟೆಗೆ ಬಂದರೆ ಪರಿಣಾಮ ನೆಟ್ಟಗೆ ಇರುವುದಿಲ್ಲವೆಂದು ಎಚ್ಚರಿಸಿ ಬಂದಿದ್ದ.
ಕೊನೆಗೊಂದು ದಿನ, ಬರೀ ಡಿಪ್ಲೋಮ ಮಾಡಿ ಸಣ್ಣ ಕೆಲಸ ಮಾಡುತ್ತಿರುವ ನೀನು ಎಂ.ಎಸ್ಸಿ ಮಾಡುತ್ತಿರುವ ತನಗೆ ಇಷ್ಟವಿಲ್ಲವೆಂದೂ ಬೇಕಾದರೆ ಅವನು ಓದಿಸಲು ಖರ್ಚು ಮಾಡಿದ ದುಡ್ಡಿನ ಎರಡರಷ್ಟನ್ನು ಅವನ ಮುಖಕ್ಕೆ ಬಿಸಾಡುವುದಾಗಿಯೂ ಅವಳು ಹೇಳಿದಾಗ ಮಾತ್ರ ಅವನಿಗೆ ಭೂಮಿಯೇ ಬಾಯಿ ಬಿರಿದು ನುಂಗಿದ ಅನುಭವವಾಗಿತ್ತು ಆದರೂ ಸಾವರಿಸಿಕೊಂಡು ನಾನು ಖರ್ಚು ಮಾಡಿದ ಹಣ ವಾಪಸ್ಸು ಕೊಡಬಹುದು ಆದರೆ ನಾ ಧಾರೆಯೆರೆದ ಪ್ರೀತಿಯನ್ನಲ್ಲ ಅಂತ ಹೇಳಿ ವಾಪಸ್ಸು ಬಂದಿದ್ದ.
ಅವಳು ದೂರಾದ ಮೇಲೆ ಜೀವನವೇ ಶೂನ್ಯವೆನ್ನಿಸಿ ಒದ್ದಾಡಿದ್ದ. ದಿನದಿಂದ ದಿನಕ್ಕೆ ಅವಳ ಮೇಲಿನ ಕೋಪ ಹೆಚ್ಚುತ್ತಾ ಹೋಗಿತ್ತು. ಅವಳನ್ನು ಹುಡುಕಿ ಕೊಂದುಬಿಡಬೇಕು ಎಂದು ಒಮ್ಮೊಮ್ಮೆ ಅಂದುಕೊಳ್ಳುತ್ತಿದ್ದ. ಬೇರೆಯವರಾಗಿದ್ದರೆ ಕುಡಿದು ಕುಡಿದೂ ದೇವದಾಸ ಆಗಿಬಿಡುತಿದ್ದರೇನೋ ಆದರೆ ಇವನು ಅವಳ ಮೇಲಿನ ಸಿಟ್ಟು ಹೊರ ಹಾಕಲು ಬೇರೆಯದೇ ದಾರಿ ಹುಡುಕಿಕೊಂಡಿದ್ದ. ಅದೇನು ಅಂದರೆ ಸುಸಜ್ಜಿತ ವ್ಯಾಯಾಮ ಶಾಲೆಯೊಂದಕ್ಕೆ ಸೇರಿಕೊಂಡಿದ್ದ. ಅವಳ ಮೇಲಿನ ಸಿಟ್ಟನ್ನು ಭಾರ ಎತ್ತುವುದು, ಓಡುವುದು ಮುಂತಾದ ಇತರೆ ವ್ಯಾಯಾಮ ಸಲಕರಣೆಗಳನ್ನುಪಯೋಗಿಸುತ್ತಾ ಅವಳ ಮೇಲಿನ ಮೊದಲಿನ ಸಿಟ್ಟನ್ನು ಕಡಿಮೆ ಮಾಡಿಕೊಂಡಿದ್ದ. ಇದರಿಂದ ಅವನ ದೈಹಿಕ ಸೌಂದರ್ಯ ಹೆಚ್ಚಿ ಇತರೆ ಹುಡುಗಿಯರೂ ಅವನೆಡೆಗೆ ಆಕರ್ಷಿತರಾಗಿ ಮದುವೆಯಾಗಲು ಹಾತೊರೆಯತೊಡಗಿದ್ದರು. ಇತ್ತ ಅವನ ಮೊದಲಿನ ಪ್ರೇಯಸಿ ಆ ಪ್ರೊಫೆಸರ್ ಜೊತೆ ಮದುವೆಯಾದ ಮೇಲೆ ತಾನು ಅವನಿಗೆ ಮೂರನೆಯ ಹೆಂಡತಿಯೆನ್ನುವುದು ಗೊತ್ತಾಗಿತ್ತು. ಈಗ ಆ ಪ್ರೊಫೆಸರ್‌ನ ಬಿಟ್ಟು ತನ್ನ ಅಪ್ಪನ ಮನೆಯಲ್ಲಿಯೇ ಇರುವ ಅವಳು ಮೊದಲಿನಂತೆಯೇ ಸಣ್ಣ ಕೆಲಸವೊಂದಕ್ಕೆ ಸೇರಿ ತನ್ನ ಜೀವನವನ್ನು ಹಳಿದುಕೊಳ್ಳುತ್ತಾ ಬದುಕುತ್ತಿದ್ದಾಳೆ.